ನಮ್ಮ ದೇಹದ ಮುಖ್ಯ ಶಕ್ತಿ ಕೇಂದ್ರಗಳಾದ ಏಳು ಚಕ್ರಗಳಲ್ಲಿ ಮಣಿಪುರ ಚಕ್ರವು ಮೂರನೆಯದು. ಇದು ಪ್ರಾಮುಖ್ಯತೆ ಪಡೆಯಲು ಕಾರಣ ಇದರ ಗುಣಗಳಾದ ಆತ್ಮ ವಿಶ್ವಾಸ, ಆತ್ಮ ಗೌರವ, ಸ್ವಯಂ ಪ್ರತಿಷ್ಠೆ, ಸ್ವಯಂ ಭರವಸೆ, ಉತ್ಸಾಹ, ಸಂತೋಷ, ಖಿನ್ನತೆ, ಕೋಪ, ಬುದ್ಧಿಶಕ್ತಿ, ಇಚ್ಛಾಶಕ್ತಿ, ಸ್ಪಷ್ಟತೆ, ಶಿಸ್ತು, ದೃಢತೆ ಮುಂತಾದವು. ಇದರ ಸಮತೋಲನವು ನಮ್ಮಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟುಹಾಕುತ್ತದೆ. ನಮ್ಮ ದೇಹದ ಉಷ್ಣತೆ ಕಾಪಾಡುವಲ್ಲಿಯೂ ಈ ಚಕ್ರದ ಪಾತ್ರವಿದೆ.
ಮಣಿಪುರ ಚಕ್ರ ಎಂದರೇನು?
ಮಣಿಪುರ ಶಬ್ದದ ಅರ್ಥ ಮಣಿಯ ಸ್ಥಳ. ಮಣಿ ಎಂದರೆ ಅಮೂಲ್ಯ ಹರಳು, ಹೊಳೆಯುವ ರತ್ನ ಎಂದು ಅರ್ಥೈಸಬಹುದು. ಮಣಿಪುರ ಚಕ್ರವು ನಿಜವಾಗಿಯೂ ನಮ್ಮ ದೇಹದ ಹೊಳೆಯುವ ರತ್ನವೇ ಏಕೆಂದರೆ ಇದು ನಮ್ಮಲ್ಲಿ ಛಲ, ಉತ್ಸಾಹ ಮುಂತಾದ ಗುಣಗಳೊಂದಿಗೆ ಅಗ್ನಿ ತತ್ವವನ್ನು ಪ್ರತಿಬಿಂಬಿಸುತ್ತದೆ. ಇವೆಲ್ಲವೂ ನಮ್ಮ ಜೀವನದಲ್ಲಿ ಮುಂದೆ ಬರಲು ಬೇಕಾದ ಬಹುಮುಖ್ಯ ಅಂಶಗಳಾಗಿವೆ.
ಮಣಿಪುರ ಚಕ್ರ ಎಲ್ಲಿದೆ?
ಮಣಿಪುರ ಚಕ್ರವು ಹೊಕ್ಕಳಿನಿಂದ ನಾಲ್ಕು ಬೆರಳುಗಳಷ್ಟು ಮೇಲೆ, ಅಂದರೆ ಎದೆಮೂಳೆ ಮತ್ತು ಹೊಕ್ಕುಳ ಮಧ್ಯದಲ್ಲಿ ಇದೆ. ಹಾಗಾಗಿ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೂ ಹಿಡಿತ ಹೊಂದಿದೆ.
ಮಣಿಪುರ ಚಕ್ರದ ಗುಣ ಲಕ್ಷಣಗಳು
ಮಣಿಪುರ ಚಕ್ರವು ಅಗ್ನಿ ತತ್ವದೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಿದೆ. ನಿಮಗೆ ಗೊತ್ತಿರಬಹುದು, ಜಠಾರಾಗ್ನಿಯಿಂದಲೇ ನಮ್ಮ ಜೀರ್ಣ ಕ್ರಿಯೆಯು ನಡೆಯುವುದು. ಹಾಗೆಯೇ ಇನ್ನಷ್ಟು ವಿವರಗಳು ಕೆಳಗನಂತಿವೆ.
ಬಣ್ಣ : ಹಳದಿ
ತತ್ವ : ಅಗ್ನಿ
ಚಿನ್ಹೆ:
ಕಂಪನ: 528 hz
ಬೀಜಮಂತ್ರ: ರಂ
ಮಣಿಪುರ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ
:ಈ ಚಕ್ರವು ಜೀರ್ಣ ಕ್ರಿಯೆಗೆ ಬೇಕಾದ ಸಮಾನ ಪ್ರಾಣವನ್ನು ಉತ್ಪಾದಿಸಿ ದೇಹಕ್ಕೆ ಕಳುಹಿಸಿ ಪೂರ್ಣ ಜೀರ್ಣ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಈ ಸಮಾನ ಪ್ರಾಣವೇ ವ್ಯಕ್ತಿಯ ಬುದ್ಧಿವಂತಿಕೆ, ಇಚ್ಛಾಶಕ್ತಿ, ಅಹಂ ಮುಂತಾದ ಗುಣಗಳನ್ನೂ ತೋರಿಸುತ್ತದೆ. ಈ ಸಮಾನ ಪ್ರಾಣವು ಜಠಾರಾಗ್ನಿ ಹಾಗೂ ಅಗ್ನಿ ತತ್ವಕ್ಕೆ ಸಂಬಂಧಿಸಿದುದರಿಂದ ದೇಹದ ಉಷ್ಣತೆ ಕಾಪಾಡಿಕೊಳ್ಳುವಲ್ಲಿ ಸಹ ಸಹಕರಿಸುತ್ತದೆ. ಅಗ್ನಿಯು ಸಾಮಾನ್ಯವಾಗಿ ಹಳದಿಯಾಗಿ ಕಾಣುವುದರಿಂದ ಈ ಚಕ್ರವನ್ನು ಹಳದಿ ಎಂದು ಗುರುತಿಸಲಾಗಿದೆ.
ಈ ಚಕ್ರದ ಚಿನ್ಹೆ ಯಲ್ಲಿ ಕಾಣುವ ಹತ್ತು ದಳಗಳುಳ್ಳ ಕಮಲವು ಮನುಷ್ಯ ದೇಹದ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುವ ಪ್ರಮುಖ ಶಕ್ತಿಗಳನ್ನು ಸೂಚಿಸುತ್ತದೆ. ಕೆಳಮುಖವಾಗಿರುವ ತ್ರಿಕೋನವು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ.
ಸಂತುಲಿತ ಮಣಿಪುರ ಚಕ್ರ
ಜಠರಾಗ್ನಿಯ ಮೂಲ ಸ್ಥನವಾಗಿರುವುದರಿಂದ ಇದು ಜಠರ, ಮೇದೋಜೀರಕ ಗ್ರಂಥಿ ಮುಂತಾದ ಅಂಗಗಳ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಆರೋಗ್ಯಕರವಾದ ಮಣಿಪುರ ಚಕ್ರವು ನಮ್ಮ ಎಷ್ಟೋ ಅನಾರೋಗ್ಯವನ್ನು ಜಯಿಸಲು ಅಥವಾ ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಇದು ಬ್ರಹ್ಮಾಂಡದಿಂದ ಪ್ರಾಣಶಕ್ತಿಯನ್ನು ನಮ್ಮೆಡೆಗೆ ಸೆಳೆದು ಒಂದು ರೀತಿಯಲ್ಲಿ ಅಯಸ್ಕಾಂತದಂತೆ ಕೆಲಸ ಮಾಡುತ್ತದೆ. ಒಂದು ಉತ್ತಮ ಮಣಿಪುರ ಚಕ್ರವನ್ನೂ ಹೊಂದಿರುವ ವ್ಯಕ್ತಿ ಈ ಕೆಳಗಿನ ನಡುವಳಿಕೆ ತೋರಿಸಬಹುದು
- ಯಾವುದೇ ಗುಂಪಿನ ಅಥವಾ ಪರಿಸ್ಥಿಯ ನಾಯಕತ್ವ ತೆಗೆದೇಕೊಳ್ಳುವುದು
- ಬದಲಾವಣೆಗೆ ಅಂಜದೆ ಹೊಸ ಹೊಸ ಸವಾಲು ಸ್ವೀಕರಿಸುವುದು
- ತಮ್ಮ ವೃತ್ತಿಜೀವನ, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ಜೀವನದ ಸಮತೋಲನ
- ತಾವು ಪ್ರಪುಲ್ಲಾರಾಗಿ, ತಮ್ಮ ಸುತ್ತಲಿನ ಜನರನ್ನೂ ಪ್ರಪುಲ್ಲರಾಗಿಸುವುದು.ಇಚ್ಛಾಶಕ್ತಿ, ಆತ್ಮವಿಶ್ವಾಸದ ಸಾಕರರೂಪದಂತಿರುವವರು.
- ಉತ್ತಮ ಜೀರ್ಣ ಶಕ್ತಿ ಹೊಂದಿರುವರು
ಅಸಂತುಲಿತ ಮಣಿಪುರ ಚಕ್ರದ ಲಕ್ಷಣಗಳು
ಮಣಿಪುರ ಚಕ್ರ ಸುಪ್ತತೆ ಹೊಂದಿದರೆ, ನಿಷ್ಕ್ರಿಯ ಅಥವಾ ಅತಿ ಕ್ರಿಯಾಶೀಲವಾಗಿದ್ದರೆ ಅದು ಕೆಲವೊಂದು ದೈಹಿಕ/ಮಾನಸಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಅವುಗಳ ಬಗ್ಗೆ ಒಂದೊಂದಾಗಿ ನೋಡೋಣ.
ದೈಹಿಕ ಲಕ್ಷಣಗಳು
- ಅಜೀರ್ಣ
- ಅನಿಯಂತ್ರಿತ ತಿನ್ನುವ ಕಾಯಿಲೆ
- ಕರುಳು ಹುಣ್ಣು, ಬಾಯಿ ಹುಣ್ಣು
- ಸಕ್ಕರೆ ಕಾಯಿಲೆ
- ಕರುಳು, ಯಕೃತ್ ಅಥವಾ ಮೇದೋಜೀರಕ ಅಂಗಗಳ ಸಮಸ್ಯೆ,
- ಅತಿಯಾದ ದೇಹದ ತೂಕ/ಬೊಜ್ಜು
- ಪಾರ್ಶ್ವ ವಾಯು
ಮಾನಸಿಕ ಲಕ್ಷಣಗಳು
ಬೇರೆಯವರನ್ನು ನಿಯಂತ್ರಿಸುವುದು/ಅತಿ ಸುಲಭವಾಗಿ ನಿಯಂತ್ರಣಕ್ಕೆ ಒಳಗಾಗುವುದು
- ಬೇರೆಯವರ ಮೇಲೆ ನಂಬಿಕೆಯ ಕೊರತೆ
- ಜೀವನದಲ್ಲಿ ಯಾವುದೇ ಮಹತ್ವಾಕಾಂಕ್ಷೆಗಳ ಇಲ್ಲದಿರುವಿಕೆ
- ಆತ್ಮ ಗೌರವದ ಕೊರತೆ
- ತಮ್ಮ ಬಗ್ಗೆ ಅತ್ಯಂತ ಕಾರುಣ್ಯಭರಿತ ಕಥೆಗಳನ್ನು ಹೇಳುವುದು.
- ವಿಷಯ ಎಷ್ಟೇ ಚಿಕ್ಕದಿರಲಿ, ತಮ್ಮನ್ನು ತಾವು ಸರಿಯೆಂದು ಸಾಬೀತುಪಡಿಸಲು ಕೂಗಾಡುವುದು, ಹೋರಾಡುವುದು.
- ಸೋಮಾರಿತನ
- ಬೇರೆಯವರ ಕೆಲಸವನ್ನು ತಮ್ಮದೆಂದು ತೋರಿಸಿಕೊಳ್ಳುವುದು.
ಅಸಂತುಲಿತ ಮಣಿಪುರ ಚಕ್ರವನ್ನು ಸಂತುಲಿತಗೊಳಿಸುವುದು.
ಮಣಿಪುರ ಚಕ್ರವು ನಮ್ಮ ದೇಹದಲ್ಲಿ ಪ್ರಾಣಶಕ್ತಿಯನ್ನು ಹರಿಸಿ ಆತ್ಮಗೌರವ, ಆತ್ಮವಿಶ್ವಾಸ, ಸಾಮರ್ಥ್ಯ, ಸಂತೋಷ ಮುಂತಾದ ಧನಾತ್ಮಕ ಗುಣಗಳನ್ನು ಹುಟ್ಟು ಹಾಕುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಜೀವನಕ್ಕಾಗಿ ತಮ್ಮ ಮಣಿಪುರ ಚಕ್ರದ ಮೇಲೆ ಕೆಲಸ ಮಾಡಿ ಅದನ್ನು ಸಂತುಲಿತಗೊಳಿಸುವುದು ಒಳಿತು.
೧. ಮಂತ್ರ:
ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ನಂತರ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ಮಣಿಪುರ ಚಕ್ರದ ಮಂತ್ರ ‘ರಂ ‘. ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ಮಣಿಪುರ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು.೨.
೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:
ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ಮಣಿಪುರ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದು.
- “ನಾನು ಸವಾಲುಗಳನ್ನು ಸ್ವೀಕರಿಸಲು ತಯಾರಿದ್ದೇನೆ.””
- “ನಾನು ಮಹತ್ವಾಕಾಂಕ್ಷೆಯುಳ್ಳ ಸಮರ್ಥ ವ್ಯಕ್ತಿಯಾಗಿದ್ದೇನೆ.””
- “ನನ್ನ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ನಾನು ಸಮರ್ಥನಿದ್ದೇನೆ.”
- “”ನಾನು ಧೈರ್ಯಶಾಲಿ.””
- *ನನ್ನ ಹಳೆಯ ತಪ್ಪುಗಳಿಂದ ಪಾಠ ಕಲಿತಿದ್ದೇನೆ.”
ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.
೩. ಮಣಿಪುರ ಚಕ್ರದ ಧ್ಯಾನ.
ಮನುಜ ಕುಲಕ್ಕೆ ಧ್ಯಾನ ಒಂದು ಅಧ್ಭುತ ಕೊಡುಗೆ. ಧ್ಯಾನದಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನಿರ್ದಿಷ್ಟವಾಗಿ ಮಣಿಪುರ ಚಕ್ರವನ್ನು ಸಕ್ರಿಯಗೊಳಿಸಲು ಕೆಲವು ಧ್ಯಾನ ಕ್ರಮಗಳಿವೆ. ಅದು ಸಾಧ್ಯವಾಗದೇ ಹೋದರೆ ರಂ ಬೀಜಮತ್ರದ ಮೇಲೆ ಧ್ಯಾನ ಮಾಡಿರಿ.
೪. ಹಳದಿ ಬಣ್ಣದ ಬಳಕೆ:
ಈ ಚಕ್ರವು ಹಳದಿ ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ಹಳದಿ ಬಣ್ಣ ಬಳಸಿ, ಹಳದಿ ಪರದೆ, ಹಳದಿ ಬಣ್ಣದ ಧ್ಯಾನದ ಆಸನ, ಇತ್ಯಾದಿ. ಹಳದಿ ಬಣ್ಣದ ಬಟ್ಟೆಯನ್ನೂ ಹೆಚ್ಚು ಹೆಚ್ಚು ಬಳಸಬಹುದು.
೫. ರೇಕಿ
ರೇಕಿಯನ್ನು ಮಣಿಪುರ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.
೬. ಯೋಗಾಸನ
ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ಮಣಿಪುರ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ಧನುರಾಸನ, ಅರ್ಧ ಮತ್ಸ್ಯಾಸನ, ಪಶ್ಚಿಮೋತ್ತಾಸನ, ಭುಜಂಗಾಸನ, ಪೂರ್ವೋತ್ತನಸಾನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು.
ಕೊನೆಯದಾಗಿ..
ನಾವು ಸೇವಿಸುವ ಆಹಾರ ಎಷ್ಟು ಮುಖ್ಯವೋ ಅದನ್ನು ನಮ್ಮ ದೇಹದ ಸಬಲತೆಗೆ ಉಪೋಯೋಗಿಸುವ ಜೀರ್ಣಾಂಗ ವ್ಯವಸ್ಥೆಯೂ ಸಹ ಅಷ್ಟೇ ಮುಖ್ಯ. ಮಣಿಪುರ ಚಕ್ರವನ್ನು ಸಂತುಲಿತಗೊಳಿಸುವುದರಿಂದ ಜೀರ್ಣಾಂಗಗಳೂ ಧನಾತ್ಮಕವಾಗಿ ಪ್ರತಿಕ್ರಿಯಿಸುವುದರಿಂದ ಇದನ್ನು ಮಾಡಿ ನೋಡಿ ಜೀವನದ ಬದಲಾವಣೆಗೆ ಸಾಕ್ಷಿಯಾಗಿ.
Discover more from cosmiqgrace.com
Subscribe to get the latest posts sent to your email.
1 comment