ಶ್ರಾವಣ ಭಾದ್ರಪದ ಬಂತೆಂದರೆ ನಮ್ಮಲ್ಲಿ ಹಬ್ಬಗಳ ಸಾಲೇ ಶುರುವಾಗುತ್ತದೆ. ಇದರಲ್ಲಿ ಜನಮನವನ್ನು ಒಂದುಗೂಡಿಸುವ ಸಂಭ್ರಮದ ಹಬ್ಬವೆಂದರೆ ಅದು ಗಣಪತಿ ಹಬ್ಬ. ಭಾದ್ರಪದ ಶುಕ್ಲದ ಚೌತಿ ದಿನದಂದು ಬೀಳುವ ಈ ಹಬ್ಬಕ್ಕೆ ಅದರದ್ದೇ ಆದ ಮಹತ್ವವಿದೆ. ಮನೆ ಮನೆಗೆ ಮಣ್ಣಿನಿಂದ ಮಾಡಿದೆ ಗಣಪನನ್ನು ತಂದು ಪೂಜಿಸುವುದು, ಚಕ್ಕುಲಿ ಮೋದಕಗಳನ್ನು ಗಣಪನ ನೈವೇದ್ಯ ಕ್ಕೆ ತಯಾರಿಸಿ ಅರ್ಪಿಸುವುದು, ಇದರ ಜೊತೆಗೆ ಸಾರ್ವಜನಿಕ ಗಣಪತಿಯನ್ನು ಒಂದೊಂದು ಸಂಘ ಸಮೂಹದವರು ಒಟ್ಟುಗೂಡಿ ಇಟ್ಟು ಪೂಜಿಸುವುದು ಇವೆಲ್ಲ ಕಣ್ಣಿಗೆ ಮನಸ್ಸಿಗೆ ಹಬ್ಬವೇ ಸರಿ.
ಇನ್ನು ನಮ್ಮ ಮನೆಯಲ್ಲಿ ಈ ಹಬ್ಬಕ್ಕೆ ಅತ್ಯಂತ ಮಹತ್ವವಿದೆ. ಇದು ಇಡೀ ವರ್ಷದಲ್ಲಿ ಬರುವ ಅತ್ಯಂತ ದೊಡ್ಡ ಹಬ್ಬ. ಇಂದು ನಾನು ನಮ್ಮ ಮನೆಯಲ್ಲಿ ಆಚರಿಸುವ ಗಣಪತಿ ಹಬ್ಬದ ವೈಶಿಷ್ಯದ ಬಗ್ಗೆ ಈ ಪುಟ್ಟ ಬ್ಲಾಗ್ ಬರೆಯಲಿಚ್ಚಿಸುತ್ತೇನೆ.
ಹಬ್ಬದ ತಯಾರಿ.
ನಮ್ಮಲ್ಲಿ ಗಣಪತಿ ಹಬ್ಬದ ತಯಾರಿ ಸುಮಾರು ಒಂದು ವಾರದಿಂದಲೇ ಶುರುವಾಗುತ್ತದೆ. ಮನೆಯ ಹಿಂದೆ ಮುಂದೆ ಬೆಳೆದಿರುವ ಕಳೆಯನ್ನು ತೆಗೆದು ಸ್ವಚ್ಛ ಮಾಡಿ, ಗುಡಿಸಿ ಸಾರಿಸಿ, ಚಪ್ಪರ ಕಟ್ಟುವುದು ಮುಂತಾದ ಅಂದ ಚೆಂದ ಮಾಡುವ ಕಾರ್ಯಕ್ರಮವಿರುತ್ತದೆ. ಅದಲ್ಲದೆ ಹಬ್ಬಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ತರುವುದು, ಪೇಟೆ ದೂರವಿರುವುದರಿಂದ ತರಕಾರಿಗಳನ್ನು ತಂದು ಬಿಡುವುದು ಇತ್ಯಾದಿ ಕೆಲಸಗಳು ಸಹ ಹಬ್ಬದ ಎರಡು ದಿನ ಮೊದಲೇ ಮುಗಿದುಬಿಡಬೇಕು. ಏಕೆಂದರೆ ಹಬ್ಬದ ಹಿಂದಿನ ದಿನ ಸಾಮಾನ್ಯವಾಗಿ ಮನೆಯ ಪುರುಷರಿಗೆ ಜನಿವಾರ ಧರಿಸುವ ಹಬ್ಬವಾದ ಉಪಾಕರ್ಮವಿರುವಿತ್ತದೆ.
ವಿಗ್ರಹದ ಬಣ್ಣ ಮತ್ತು ಎತ್ತರ
ನಮ್ಮ ಹೊನ್ನಾವರ ಸುತ್ತಮುತ್ತಲಿನ ಪ್ರದೇಶದ ಸಂಪ್ರದಾಯದಲ್ಲಿ ಎರಡು ಬಣ್ಣದ ಗಣಪತಿ ವಿಗ್ರಹಗಳನ್ನು ಮನೆಗೆ ತರುವ ರೂಢಿಯಿದೆ. ಕೆಂಪು ಬಣ್ಣದ ವಿಗ್ರಹವು ಉದಯವಾಗುತ್ತಿರುವ ಸೂರ್ಯನಂತೆ ಆ ಪ್ರಖರ ಶಕ್ತಿಯನ್ನು ನೆನಪಿಸಿದರೆ, ಬಿಳಿಬಣ್ಣದ ವಿಗ್ರಹವು ಭಕ್ತಿ ಮತ್ತು ಶುದ್ಧತೆ ಯನ್ನು ಹೊಂದಿರುವ ಚಂದ್ರನನ್ನು ನೆನಪಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಕೆಂಪು ಬಣ್ಣದ ವಿಗ್ರಹವು ಗಣಪತಿಯ ಉಗ್ರ ರೂಪವನ್ನೂ, ಮತ್ತು ಬಿಳಿ ಬಣ್ಣದ ವಿಗ್ರಹವು ಗಣಪತಿಯ ಶಾಂತ ರೂಪವನ್ನು ಪ್ರತಿನಿಧಿಸುತ್ತದೆ.
ಸಾಮಾನ್ಯವಾಗಿ ಗಣಪತಿ ವಿಗ್ರಹವು ಒಂದರಿಂದ ಎರಡು ಅಡಿ ಎತ್ತರವಿರುತ್ತದೆ .ವರ್ಷದಿಂದ ವರ್ಷಕ್ಕೆ ಗಣಪತಿ ವಿಗ್ರಹವನ್ನು ಒಂದು ಅಂಗುಲದಷ್ಟು ಹೆಚ್ಚಿಸುತ್ತಾರೆ. ಯಾರ ಮನೆಯಲ್ಲಿ ಸೂತಕ ಉಂಟಾಗುತ್ತದೋ ಅಂತಹ ಮನೆಯ ವಿಗ್ರಹವನ್ನು ಎತ್ತರದಲ್ಲಿ ಕಡಿಮೆ ಮಾಡುತ್ತಾರೆ.
ಹಬ್ಬದ ದಿನ
ನಮ್ಮ ಮನೆಗೆ ಬರ ಮಾಡಿಕೊಳ್ಳುವ ಗಣಪತಿ ವಿಗ್ರಹವು ಕೆಂಪು ಬಣ್ಣದ್ದು. ಹಬ್ಬದ ದಿನ ಬೆಳಿಗ್ಗೆಯಿಂದ ಮನೆಯ ಎಲ್ಲಾರೂ ಹಬ್ಬದ ತಯಾರಿಯಲ್ಲಿ ತೊಡಗುತ್ತೇವೆ. ಅಡುಗೆಯನ್ನು ಮಡಿಯಲ್ಲಿ ಮಾಡಬೇಕಾಗುವುದರಿಂದ ನಮ್ಮ ಅತ್ತೆಯವರು ಮೊದಲು ಸ್ನಾನ ಮಾಡಿ ಅಡುಗೆ ಮನೆಗೆ ಬಂದುಬಿಡುತ್ತಾರೆ. ನಾವೆಲ್ಲ ಮನೆಯ ಉಳಿದ ಶುಚಿ ಕಾರ್ಯಗಳನ್ನು ಮಾಡಿ, ತಿಂಡಿ ಚಹಾದ ನಂತರ ಸ್ನಾನ ಮಾಡಿ ತಯಾರಾಗಿ ಬಂದು ಅಡುಗೆ ಕಾರ್ಯಕ್ಕೆ ಸಹಾಯ ಮಾಡುತ್ತೇವೆ. ಪುರುಷರು ಗಣೇಶ ನಿಗಾಗಿ ಮಂಟಪದ ಅಲಂಕಾರ, ಮಂಟಪದ ಮೇಲ್ಭಾಗದಲ್ಲಿ ಫಲಾವಳಿ ಕಟ್ಟುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಫಲಾವಳಿಯಲ್ಲಿ ನಮಗೆ ಸಿಗುವ ಹಣ್ಣು ತರಕಾರಿಗಳು, ಮತ್ತು ಮನೆಯಲ್ಲಿ ಬೆಳೆಯುವ ಎಲ್ಲ ಫಲಗಳನ್ನು ಕಟ್ಟುವ ರೂಢಿಯಿದೆ. ಹಾಗಾಗಿ ತೆಂಗಿನಕಾಯಿ, ಅಡಕೆಯ ಜೊತೆಗೆ ಹಣ್ಣು ಹಂಪಲುಗಳು, ಎಲ್ಲ ವಿಧದ ತರಕಾರಿಗಳನ್ನು ಬಹಳ ಎಚ್ಚರಿಕೆ ಯಿಂದ ಎಲ್ಲೂ ಕೆಳಗೆ ಬೀಳದಂತೆ ಬಿಗಿಯಾಗಿ ಕಟ್ಟಬೇಕು.
ಇವೆಲ್ಲ ನಡೆಯುವಾಗ ಬೆಳಿಗ್ಗೆ ಸುಮಾರು 11-12 ಗಂಟೆಯ ಹೊತ್ತಿಗೆ ಗಣಪತಿಯನ್ನು ಬರಮಾಡಿಕೊಳ್ಳುವ ಸಮಯ ಬಂದುಬಿಡುತ್ತದೆ. ಗಣಪತಿಯನ್ನು ಮಡಿಯಲ್ಲಿ ಎತ್ತಿಕೊಂಡು ಘಂಟೆ ಜಾಗಟೆ ಗಳ ಶಬ್ದ ದ ಜೊತೆ ಒಳತರುತ್ತೇವೆ. ಒಳಗೆ ತಂದು ಮಂಟಪದಲ್ಲಿ ಕೂರಿಸಿ ಹೂವು, ದೂರ್ವೆ ಮುಂತಾದವುಗಳಿಂದ ಅಲಂಕಾರ ಮಾಡುವ ಕೆಲಸ ನಡೆಯುತ್ತದೆ.
ಸಾಮಾನ್ಯವಾಗಿ ಗಣೇಶ ಹಬ್ಬದ ಸಮಯದಲ್ಲಿ ಪುರೋಹಿತರಿಗೆ ಬಹಳಷ್ಟು ಬೇಡಿಕೆ ಇರುವುದರಿಂದ ಅವರು ಬರುವುದು ತಡವಾಗುವುದು ಸಹಜ, ಹಾಗಾಗಿ ನಮ್ಮಲ್ಲಿಯೂ ಪುರೋಹಿತರು ಮಧ್ಯಾಹ್ನ 4 ಘಂಟೆಯ ಮೇಲೆ ಬರುವುದರಿಂದ 12 ಗಂಟೆಯ ಸಮಯದಲ್ಲಿ ಮನೆಯವರೆಲ್ಲ ಸಣ್ಣ ಉಪಹಾರ ಮಾಡಿರುತ್ತೇವೆ.
ನಮ್ಮಲ್ಲಿ ಪುರೋಹಿತರು ಬರುವವರೆಗೂ ಅಡುಗೆ ಕಾರ್ಯ ನಡೆಯುತ್ತಲೇ ಇರುತ್ತದೆ. ಅಷ್ಟಕ್ಕೂ ಅಡುಗೆಗೆ ಮೂವತ್ತಕ್ಕೂ ಮಿಗಿಲಾದ ಭಕ್ಷ್ಯ ಗಳು ತಯಾರಾಗಬೇಕಲ್ಲ. ಅದರಲ್ಲಿ ಕೆಲವು – 2-3 ಪ್ರಕಾರದ ಪಲ್ಯ, ತಂಬುಳಿ, ಹಶಿ(ತರಕಾರಿ, ತೆಂಗಿನಕಾಯಿ, ಮಜ್ಜಿಗೆ ಸೇರಿಸಿ ಮಾಡುವ ಗೊಜ್ಜಿನ ತರಹದ ಪದಾರ್ಥ), ಚಟ್ನಿ, ಉಂಡೆಗಳು, ಹಪ್ಪಳ, ಬೋಂಡಾ, ಮೋದಕ, ಚಕ್ಕುಲಿ, ಅತಿರಸ, ಪಾಯಸ, ಖಟ್ನೆ(ಕಾಳು ಮೆಣಸು, ಶುಂಠಿ, ಜೀರಿಗೆ, ಕೊತ್ತುಂಬರಿ, ಬೆಲ್ಲ, ನಿಂಬೆಹಣ್ಣು ಇಂತಹ ಪದಾರ್ಥಗಳನ್ನು ಬಳಸಿ ಮಾಡುವ ತಿಳಿಸಾರು), ಪಂಚಗಜ್ಜಾಯ, ಎಳ್ಳು ಚಿಗುಳಿ, ಕಡುಬು ಮತ್ತೆ ಇದೆಲ್ಲದರ ಜೊತೆಗೆ ಅನ್ನ, ಸಾಂಬಾರ್ ಇವೆಲ್ಲವೂ ನೈವೇದ್ಯದ ಸಮಯದಲ್ಲಿ ಗಣಪನ ಮುಂದೆ ತಂದಿಡಬೇಕು.
ಇವೆಲ್ಲ ಮಾಡಿ ಮುಗಿಸಲಿಕ್ಕೂ ಪುರೋಹಿತರು ಬರುವುದಕ್ಕೂ ಸಮಯ ಸರಿಹೊಂದುತ್ತದೆ. ಮನೆಯವರು, ದೂರದಲ್ಲಿ ನೆಲೆಸಿದ ನನ್ನ ಮಾವನವರ ಅಣ್ಣ ತಮ್ಮಂದಿರು, ಮತ್ತವರ ಕುಟುಂಬ ಎಲ್ಲಾರೂ ಒಟ್ಟುಗೂಡಿ ಪೂಜೆಯಲ್ಲಿ ಭಾಗವಹಿಸಿ ಗಣಪನ ಆಶೀರ್ವಾದ ಬೇಡುತ್ತೇವೆ. ಪೂಜೆಯಲ್ಲಿ ಗಂಟೆ ಜಾಗಟೆ, ಶಂಖಗಳ ಅಬ್ಬರದೊಂದಿಗೆ ಪೂಜೆ ಸಂಪನ್ನಗೊಳ್ಳುತ್ತದೆ.
ಪೂಜೆ ಮುಗಿದ ನಂತರ ಊಟದ ಸಮಯ – ಇಂದು ಎಲ್ಲರಿಗೂ ಬಾಳೆ ಎಲೆಯಲ್ಲಿ ಊಟ. ಹಾಗಾಗಿ ಮೊದಲ ಪಂಕ್ತಿಯಲ್ಲಿ ಪುರೋಹಿತರು, ಮನೆಯ ಪುರುಷರು, ಅತಿಥಿ ಗಳು ಮತ್ತು ಮಕ್ಕಳು ಕೂರುತ್ತಾರೆ. ಈ ವ್ಯವಸ್ಥೆ ಏಕೆಂದರೆ ಪುರುಷರು ಅವರ ಊಟದ ಮೊದಲು ಚಿತ್ರಾಹುತಿ ನೀಡುವ ಪದ್ಧತಿಯಿದೆ. ಈ ಆಚರಣೆಯು ಜನಿವಾರ ಧರಿಸಿರುವ ಯಾವುದೇ ಪುರುಷನ ಕರ್ತವ್ಯ ಮತ್ತು ಆಚರಣೆಯಾಗಿರುತ್ತದೆ. ಇದರ ಅರ್ಥ ಚಿತ್ರ, ಚಿತ್ರಗುಪ್ತ ಮತ್ತು ಯಮರಿಗೆ ಸೇವಿಸುವ ಆಹಾರದ ಚಿಕ್ಕ ಪಾಲನ್ನು ತಟ್ಟೆ/ ಎಲೆಯ ಪಕ್ಕದಲ್ಲಿ ತೆಗೆದಿಡುತ್ತಾರೆ. ಅಂದರೆ ನೈಸರ್ಗಿಕ ತತ್ವಗಳನ್ನು ಆಳುವ ದೇವತೆಗಳಿಗೆ ನಮ್ಮ ಆಹಾರವನ್ನು ಅರ್ಪಿಸುವುದು. ಇದು ಮಾಡುವ ಪದ್ಧತಿ ಮಹಿಳೆಯರಿಗೆ ಇಲ್ಲವಾದ್ದರಿಂದ ಮೊದಲು ಪುರುಷರು ಪಂಕ್ತಿಯಲ್ಲಿ ಕೂತು ತಾವು ಆಹಾರ ಸೇವಿಸುವ ಮೊದಲು ದೇವತೆಗಳಿಗೆ ಅರ್ಪಿಸಿ ನಂತರ ಅವರು ಸೇವಿಸುತ್ತಾರೆ.
ಇನ್ನು ಅತಿಥಿ ದೇವೋ ಭವ ಎಂಬಂತೆ ಬಂದ ಅತಿಥಿ ಗಳಿಗೆ ಮೊದಲ ಪ್ರಾಶಸ್ತ್ಯ ಇರಲೇಬೇಕು. ಮಕ್ಕಳು ಕೂಡಾ ದೇವರಂತೆ. ಹೀಗಾಗಿ ಇವರಿಗೆ ಬಡಿಸಿದ ನಂತರ ನಾವು ಹೆಂಗಸರು ಕೊನೆಯಲ್ಲಿ ಊಟಕ್ಕೆ ಕೂರುವಾಗ ಸುಮಾರು ಸಂಜೆ ೫.೩೦- ೬ ಆಗಿರುತ್ತದೆ.
ಇವೆಲ್ಲ ಆದ ನಂತರ ಗಣಪನಿಗೆ ಸಂಜೆಯ ಆರತಿ ನನ್ನ ಮಾವನವರು ಅಥವಾ ಪತಿ ಮುಗಿಸುತ್ತಾರೆ. ಈ ಸಮಯದಲ್ಲಿ ನೆರೆಹೊರೆಯವರು, ನೆಂಟರಿಷ್ಟರು ಬಂದು ಗಣಪ ನನ್ನು ನೋಡಿ ನಮಿಸಿ ಹೋಗುತ್ತಾರೆ. ಸಂಜೆ ಇಷ್ಟೆಲ್ಲಾ ಆದ ಮೇಲೆ ಊಟಕ್ಕೆ ಹಸಿವಿರುವುದಿಲ್ಲ. ಬೇಕಿದ್ದರೆ ಸಣ್ಣ ಫಲಾಹಾರ ಮಾಡಬಹುದು. ಇಲ್ಲಿಗೆ ಮೊದಲನೇ ದಿನದ ಗಣಪತಿ ಹಬ್ಬ ಮುಗಿಯುತ್ತದೆ.
ಇವಿಷ್ಟು ನಮ್ಮ ಸಂಪ್ರದಾಯಗಳ ಪ್ರಕಾರ ಆಚರಿಸುವ ವಿಧಿಯಾದರೆ,ಇನ್ನು ಇದರ ಹಿಂದಿನ ಆಧ್ಯಾತ್ಮಿಕ ಅರ್ಥವನ್ನು, ಉದ್ದೇಶವನ್ನು ತಿಳಿಯೋಣ.
ಗಣೇಶ ಚತುರ್ಥಿ ಆಚರಣೆಯ ಹಿಂದಿರುವ ಆಧ್ಯಾತ್ಮಿಕ ಕಾರಣ
ಗಣಪತಿ ಅಥರ್ವಶೀರ್ಷ ದಲ್ಲಿ ಒಂದು ಸಾಲು ಗಣಪತಿಯನ್ನು ಸ್ತುತಿಸುವಾಗ ಹೀಗೆ ಬರುತ್ತದೆ – “ತ್ವಂ ಮೂಲಾಧಾರ ಸ್ಥಿತೋಸಿ ನಿತ್ಯಂ”. ಅಂದರೆ ಗಣಪತಿಯು ಮೂಲಾಧಾರ ಚಕ್ರವನ್ನು ಆಳುವ ದೇವತೆಯೆಂದು ನಮಗೆ ನಮ್ಮ ಉಪನಿಷತ್ನಿಂದಲೇ ತಿಳಿದು ಬರುತ್ತದೆ.
ಸಿದ್ಧಿದಾತ ಗಣಪ ಎಲ್ಲ ಜೀವಜಂತುಗಳ ಮೂಲಾಧಾರ ಚಕ್ರದಲ್ಲಿ ಕುಳಿತು ಅಲ್ಲಿಂದ ಉಳಿದ ಚಕ್ರಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಇನ್ನೊಂದು ರೀತಿ ಹೇಳಬೇಕೆಂದರೆ ಮೂಲಾಧಾರ ಚಕ್ರ ಸಕ್ರಿಯಗೊಳ್ಳದೆ ಉಳಿದ ಚಕ್ರಗಳ ಸಕ್ರಿಯಗೊಳ್ಳಲು ಸಾಧ್ಯವಿಲ್ಲ. ಕುಂಡಲಿನಿ ಶಕ್ತಿ ಉಗಮವಾಗುವುದೇ ಈ ಚಕ್ರದಿಂದ. ಇಲ್ಲಿಂದ ಮೇಲೇರಲು ಕುಂಡಲಿನಿ ಶಕ್ತಿಯ ಮೂಲ ಅಂದರೆ ಇದೆ ಮೂಲಾಧಾರ ಚಕ್ರ ಸಕ್ರಿಯವಾಗಿರಬೇಕು. ಅದಕ್ಕಾಗಿಯೇ ನಮ್ಮೆಲ್ಲ ಮಂಗಳ ಕಾರ್ಯಗಳಲ್ಲೂ ಗಣಪನಿಗೆ ಅಗ್ರಪೂಜೆ ಸಲ್ಲುತ್ತದೆ ಏಕೆಂದರೆ ಅವನೇ ಎಲ್ಲದಕ್ಕೂ ಮೂಲಕಾರಕನಾಗಿದ್ದಾನೆ.
ಒಬ್ಬರ ಜೀವನ ಚೆನ್ನಾಗಿರಲು ಅವರ ಮೂಲಾಧಾರ ಚಕ್ರದ ಶಕ್ತಿಯ ಮೇಲೆ ಅದು ಅವಲಂಬಿತವಾಗಿರುತ್ತದೆ. ಒಬ್ಬ ವ್ಯಕ್ತಿಯ ಕೌಟುಂಬಿಕ ಸಂತೋಷ, ಜೀವನ ನಡೆಸಲು ಬೇಕಾದ ಬುದ್ಧಿಮತ್ತೆ, ಸಂಪತ್ತು ಇವೆಲ್ಲವೂ ಸಂತುಲಿತ ಮೂಲಾಧಾರ ಚಕ್ರವು ನೀಡಬಲ್ಲದು. ಅಂದರೆ ಇಹಲೋಕದಲ್ಲಿ ಉತ್ತಮ ಜೀವನ ನಡೆಸಲು ಉತ್ತಮ ಮೂಲಾಧಾರ ಚಕ್ರ ಹೊಂದಿರಬೇಕು ಮತ್ತು ಉತ್ತಮ ಮೂಲಾಧಾರ ಚಕ್ರವನ್ನು ಹೊಂದಲು ಗಣಪತಿಯ ಆಶೀರ್ವಾದ ಬೇಕು.
ಮೂಲಾಧಾರ ಚಕ್ರ ವನ್ನು ಕೆಂಪು ಬಣ್ಣದಲ್ಲಿ ಪ್ರತಿನಿಧಿಸುತ್ತೇವೆ. ಗಣಪತಿಗೂ ಸಹ ಕೆಂಪು ಬಣ್ಣದ ಹೂವು ಪ್ರಿಯವಾದುದೆಂಬ ನಂಬಿಕೆ ಇದೆ. ಇನ್ನು ಬಗೆ ಬಗೆ ಭಕ್ಷ್ಯ ಭೋಜ್ಯ ಗಳು ಸಹ ನಮ್ಮ ಮೂಲಾಧಾರ ಚಕ್ರವನ್ನು ಉತ್ತೇಜಿಸುತ್ತದೆ. ಈ ಹಬ್ಬದಲ್ಲಿ ಮಾಡುವ ಪ್ರತಿಯೊಂದು ಪದ್ಧತಿಯೂ ಸಹ ಮೂಲಾಧಾರ ಚಕ್ರವನ್ನು ಉತ್ತೇಜಿಸಿ, .ಸಮತೋಲನಗೊಳಿಸುವುದೇ ಆಗಿದೆ. ಮೂಲಾಧಾರ ಚಕ್ರದ ಬಗೆಗಿನ a ಇನ್ನಷ್ಟು ಮಾಹಿತಿಗೆ ಈ ಕೊಂಡಿಗೆ ಭೇಟಿ ನೀಡಿ.
ಸಮಾಪ್ತಿ
ನಿಮ್ಮ ನಿಮ್ಮ ಮನೆಗಳಲ್ಲಿ ಗಣಪತಿ ಹಬ್ಬವನ್ನು ಹೇಗೆ ಆಚರಿಸುವಿರೋ ಅದರ ಜೊತೆಗೆ ಆದ ಹಿಂದಿರುವ ಉದ್ದೇಶವನ್ನು ಅರ್ಥೈಸಿಕೊಂಡು ಹಬ್ಬ ಆಚರಿಸಿದ್ದೆ ಆದಲ್ಲಿ ಬಹುಬೇಗ ನಿಮ್ಮ ಜೀವನ ಉನ್ನತ ಮಟ್ಟಕ್ಕೇರಬಹುದು. ಎಲ್ಲರಿಗೂ ಗೌರಿ ಗಣೇಶ ಹಬ್ಬಕ್ಕಾಗಿ ಮುಂಚಿತ ಶುಭಾಶಯಗಳು. ಜೊತೆಗೆ ನಿಮ್ಮ ನಿಮ್ಮ ಮನೆಯಲ್ಲಿ ಗಣೇಶ ಹಬ್ಬ ಆಚರಿಸುವ ಸಂಪ್ರದಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
Discover more from cosmiqgrace.com
Subscribe to get the latest posts sent to your email.