ನಮ್ಮ ದೇಹದ ಮುಖ್ಯ ಶಕ್ತಿ ಕೇಂದ್ರಗಳಾಗಿರುವ ಏಳು ಚಕ್ರಗಳಲ್ಲಿ ಮೊದಲನೆಯದು ಈ ಮೂಲಾಧಾರ ಚಕ್ರ. ಇದು ಎಲ್ಲಾ ಚಕ್ರಗಳಿಗೂ ಅಡಿಪಾಯದ ರೀತಿ ಕೆಲಸ ಮಾಡುತ್ತದೆ. ಈ ಚಕ್ರವನ್ನು ತಿಳಿದು ಅದರ ಮೇಲೆ ಕೆಲಸ ಮಾಡಿದರೆ ನಮ್ಮ ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಯೋಗಕ್ಷೇಮ ಹೆಚ್ಚಿಸುತ್ತದೆ. ಈ ಲೇಖನದಲ್ಲಿ ಮೂಲಾಧಾರ ಚಕ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

ಮೂಲಾಧಾರ ಚಕ್ರ ಎಂದರೇನು?

ಮೂಲಾಧಾರ ಚಕ್ರವು ಎರಡು ಪದದಿಂದ ಉತ್ಪತ್ತಿಯಾಗಿದೆ – ಮೂಲ ಮತ್ತು ಆಧಾರ. ಅಂದರೆ ಹೆಸರೇ ಹೇಳುವಂತೆ ಇದೊಂದು ಅಡಿಪಾಯ. ಕಟ್ಟಡ ಕಟ್ಟುವ ಮುಂಚೆ ಅಡಿಪಾಯ ಹಾಕುವುದು ಎಷ್ಟು ಮುಖ್ಯವೋ, ನಮ್ಮ ದೇಹಕ್ಕೂ ಅಷ್ಟೇ ಮುಖ್ಯ ಈ ಚಕ್ರ. ಕುಂಡಲಿನಿ ಶಕ್ತಿಯ ಜಾಗರಣೆ ಈ ಮೂಲಾಧಾರ ಚಕ್ರದಿಂದ ಶುರುವಾಗುತ್ತದೆ. ಕುಂಡಲಿನಿ ಶಕ್ತಿಯು ಈ ಚಕ್ರದಿಂದ ಮೇಲೇರಿ ಬೇರೆಲ್ಲಾ ಚಕ್ರವನ್ನು ಹಾದು ಹೋಗುತ್ತದೆ. ನಮ್ಮ ಮೂಲಭೂತ ಪ್ರವೃತ್ತಿಗಳಾದ ಬದುಕುಳಿಯುವ ಹಂಬಲ, ಬೆಳವಣಿಗೆ ಮುಂತಾದ ಗುಣಗಳು ಈ ಚಕ್ರದಿಂದ ಪ್ರೋತ್ಸಾಹಿಸಲ್ಪಡುತ್ತದೆ. ಇದು ಒಂದು ರೀತಿಯಲ್ಲಿ ನಮ್ಮ ಬೇರು ಕೂಡಾ ಹೌದು. ಗಿಡ ಮರಗಳ ಬೇರುಗಳು ಹೇಗೆ ಭೂಮಿಯಿಂದ ಪೋಷಣೆ ಹೀರಿಕೊಂಡು ಮರದ ಎಲ್ಲಾ ಭಾಗಗಳಿಗೆ ಹೇಗೆ ಕಳುಹಿಸುತ್ತದೋ ಹಾಗೆ ಈ ಚಕ್ರವು ಸಹ ಉಳಿದ ಎಲ್ಲಾ ಚಕ್ರಗಳ ಯೋಗಕ್ಷೇಮಕ್ಕೆ ಕಾರಣವಾಗುತ್ತದೆ.

ಮೂಲಾಧಾರ ಚಕ್ರದ ಗುಣಲಕ್ಷಣಗಳು

ಚಕ್ರಗಳು ಯಾವುದೇ ಬಣ್ಣ, ಆಕಾರ, ಇಲ್ಲದ ಶಕ್ತಿ ಕೇಂದ್ರಗಳಾದರೂ ಸಹ, ಅದರ ಗುಣಲಕ್ಷಣಗಳ ಮೇಲೆ ನಾವು ಕೆಲವೊಂದು ಆಕಾರ, ಬಣ್ಣ, ತತ್ವ ಗಳಿಂದ ಗುರುತಿಸುತ್ತೇವೆ. ಅಂತಹ ಕೆಲವೊಂದು ಮಾಹಿತಿ ಈ ಕೆಳಗೆ ನೀಡಲಾಗಿದೆ.

ಬಣ್ಣ : ಕೆಂಪು

ಚಿನ್ಹೆ:

ತತ್ವ : ಪೃಥ್ವಿ

ಕಂಪನ : 396 hz

ಬೀಜಮಂತ್ರ : ಲಂ

ಮೂಲಾಧಾರ ಚಕ್ರ ಎಲ್ಲಿದೆ?

ಮೂಲಾಧಾರ ಚಕ್ರದ ಸ್ಥಾನ ಬೆನ್ನು ಹುರಿಯ ತಳಭಾಗದಲ್ಲಿ. ಗುದದ್ವಾರ ಮತ್ತು ಜನನಾಂಗದ ಮಧ್ಯ ಭಾಗದಲ್ಲಿ. ಬೇರುಗಳು ರೀತಿ ಕೆಲಸ ಮಾಡಲು ಈ ಸ್ಥಾನ ಸೂಕ್ತವಾಗಿದೆ.

ಮೂಲಾಧಾರ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ

ಈ ಮೊದಲೇ ಹೇಳಿದಂತೆ ಮೂಲಾಧಾರ ಚಕ್ರವು ನಮ್ಮ ದೇಹದ ಪೃಥ್ವಿಯ ತತ್ವವನ್ನು ನಿಯಂತ್ರಿಸುತ್ತದೆ. ನಾವು ಸೇವಿಸುವ ಆಹಾರದಿಂದ ಮುಖ್ಯವಾದ ಭೂತತ್ವವು ನಮಗೆ ಸಿಗುತ್ತದೆ. ಈ ಚಕ್ರವು ಅಪಾನ ಪ್ರಾಣವನ್ನು ಕಳುಹಿಸಿ ದೇಹಕ್ಕೆ ಬೇಡವಾದ, ವಿಷಕಾರಿ ಅಂಶಗಳನ್ನು ವಿಸರ್ಜಿಸಿ, ಭೂತತ್ವ ಸುಸ್ಥಿತಿಯಲ್ಲಿರಲು ಸಹಾಯ ಮಾಡುತ್ತದೆ. ಭೂತತ್ವವು ಕೆಂಪು ಬಣ್ಣ ವನ್ನು ಪ್ರತಿನಿಧಿಸುವುದರಿಂದ ಇದರ ಬಣ್ಣವೂ ಕೆಂಪು.

ಇದರ ಚಿನ್ಹೆಯನ್ನು ನಾಲ್ಕು ದಳಗಳ ಕಮಲದಿಂದ ತೋರಿಸುತ್ತಾರೆ. ಈ ನಾಲ್ಕು ದಳಗಳು ಮನಸ್ಸಿನ ನಾಲ್ಕು ಕಾರ್ಯಗಳಾದ ಮನಸ್, ಬುದ್ಧಿ, ಚಿತ್ತ, ಮತ್ತು ಅಹಂಕಾರಗಳನ್ನು ಪ್ರತಿನಿಧಿಸುತ್ತವೆ. ತಲೆ ಕೆಳಗಾಗಿ ಇರುವ ತ್ರಿಕೋಣವು ಭೂ ತತ್ವವನ್ನು ತೋರಿಸುತ್ತದೆ.

ದೇಹದ ಚಕ್ರ ವ್ಯವಸ್ಥೆ ಯ ಮೊದಲನೇ ಚಕ್ರವಾಗಿರುವುದರಿಂದ ಇದು ಬಾಲ್ಯದಲ್ಲೇ ಅಭಿವೃದ್ಧಿಗೊಳ್ಳುತ್ತದೆ. ಭಾವನೆಗಳಾದ ಬಾಂಧವ್ಯ, ಸುರಕ್ಷತೆ, ಪ್ರೀತಿ ಮುಂತಾದವುಗಳು ಪೋಷಕರಿಂದ ಬಾಲ್ಯದಲ್ಲೇ ಅಭಿವೃದ್ಧಿಗೊಳ್ಳುತ್ತದೆ. ಪೋಷಕರ ಪಾತ್ರ ಈ ಕಾರಣಕ್ಕಾಗಿಯೂ ಪ್ರಾಮುಖ್ಯತೆ ಪಡೆಯುತ್ತದೆ.

ಸಂತುಲಿತ ಮೂಲಾಧಾರ ಚಕ್ರ

ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಧಾರ ಚಕ್ರವು ವ್ಯಕ್ತಿಯ ದೈಹಿಕ ಕ್ಷಮತೆ ಮತ್ತು ಮಾನಸಿಕ ಸದೃಢತೆಗಳನ್ನ ಹೆಚ್ಚಿಸುತ್ತದೆ. ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಬಂಧ ಹೊಂದಿದವನಾಗುತ್ತನೆ. ವ್ಯಕ್ತಿಯು ಸುರಕ್ಷಾ ಭಾವ ಮತ್ತು ಆತ್ಮ ವಿಶ್ವಾಸ ಹೊಂದಿರುತ್ತಾನೆ. ಈ ಚಕ್ರವು ಮೂಲಭೂತ ಅಗತ್ಯತೆಗಳೊಂದಿಗೆ ಹೊಂದಿಕೊಂಡಿರುವುದರಿಂದ ಸಕ್ರಿಯ ಮೂಲಾಧಾರ ಚಕ್ರವು ವ್ಯಕ್ತಿಯ ಮೂಲಭೂತ ಅಗತ್ಯತೆಗಳಾದ ಆಹಾರ, ಸೂರು, ಇತ್ಯಾದಿ ವಿಚಾರ ಗಳ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಪ್ರೇರಪಿಸುತ್ತದೆ. ಇಂತಹವರ ಕೆಲವು ಗುಣಲಕ್ಷಣಗಳು ಈ ಕೆಳಗಿನಂತಿವೆ.

  • ಕಷ್ಟ ಸಮಯದಲ್ಲೂ ಧೈರ್ಯದಿಂದ ಧೃಡವಾಗಿ ನಿಲ್ಲುವುದು
  • ಬದುಕು ನೀಡುವ ಕಷ್ಟ ಸುಖಗಳ ಬಗ್ಗೆ ನಿರ್ಲಿಪ್ತವಾಗಿರುವುದು
  • ತಮ್ಮ ಸುತ್ತಲಿನ ಜನರಿಗೆ ಕಷ್ಟದಲ್ಲಿ ಸಹಾಯ ಹಸ್ತ ನೀಡುವುದು
  • ತಮ್ಮ ಪ್ರೀತಿ ಪಾತ್ರರಿಗೆ ಬೇಷರತ್ ಪ್ರೀತಿ ನೀಡುವುದು ಮತ್ತು ನಿಷ್ಠೆಯಿಂದಿರುವುದು.
  • ಆರೋಗ್ಯಕರ ದೇಹ ತೂಕ ಹೊಂದಿರುವುದು
  • ಹಣದ ವಿಚಾರದಲ್ಲಿ ಸ್ಥಿತಿವಂತನಾಗಿರುವುದು
ಸುಪ್ತವಾಗಿರುವ ಮೂಲಾಧಾರ ಚಕ್ರದ ಲಕ್ಷಣಗಳು

ಮೂಲಾಧಾರ ಚಕ್ರ ಸುಪ್ತತೆ ಹೊಂದಿದರೆ, ನಿಷ್ಕ್ರಿಯ ಅಥವಾ ಅತಿ ಕ್ರಿಯಾಶೀಲವಾಗಿದ್ದರೆ ಅದು ಕೆಲವೊಂದು ದೈಹಿಕ/ಮಾನಸಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಅವುಗಳ ಬಗ್ಗೆ ಒಂದೊಂದಾಗಿ ನೋಡೋಣ

  • ದೈಹಿಕ ಲಕ್ಷಣಗಳು
  • ಜಡತ್ವ, ಮಂದತೆ, ಆಲಸ್ಯ, ಇತ್ಯಾದಿ
  • ನಿದ್ರಾಹೀನತೆ/ಹೆಚ್ಚು ನಿದ್ರೆ
  • ಜೀರ್ಣಾಂಗ ಸಮಸ್ಯೆ

  • ಸೊಂಟನೋವಿನ ಸಮಸ್ಯೆ
  • ಸಂತಾನೋತ್ಪತ್ತಿ ಅಂಗಗಳ ಸಮಸ್ಯೆ
  • ಮೂತ್ರಕೋಶ, ಕರುಳು ಮುಂತಾದ ಅಂಗಗಳ ಸಮಸ್ಯೆ
  • ದೇಹದ ತೂಕದಲ್ಲಿ ಏರಿಳಿತ
ಮಾನಸಿಕ ಲಕ್ಷಣಗಳು
  • ಖಿನ್ನತೆ, ನಿರಾಸಕ್ತಿ
  • ಗಾಬರಿ, ಆತಂಕ, ಅಭದ್ರತಾ ಭಾವ
  • ಜಿಪುಣತನ
  • ಬೇಕಾಗಿರುವ, ಬೇಡದಿರುವ ವಸ್ತುಗಳನ್ನು ಒಟ್ಟುಗೂಡಿಸುವುದು
  • ಆಕಾಂಕ್ಷೆಯ ಕೊರತೆ
  • ಜೀವನದಲ್ಲಿ ದಿಕ್ಕು ತೋಚದಿರುವಿಕೆ
  • ಹಣದ ವಿಚಾರದಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವುದು
  • ತಮ್ಮ ಜೀವನದ ಕಷ್ಟಗಳಿಗೆ ಬೇರೆಯವರ ಮೇಲೆ ಆರೋಪ ಹೊರಿಸುವುದು
  • ಯಾವುದೇ ಕೆಲಸ ಆರಂಭಿಸಲು ಮತ್ತು ಅದನ್ನು ಮುಗಿಸಲು ಕಷ್ಟ ಪಡುವುದು
ಅಸಂತುಲಿತ ಮೂಲಾಧಾರ ಚಕ್ರವನ್ನು ಸಂತುಲಿತಗೊಳಿಸುವುದು

ಈ ಚಕ್ರವು ನಮ್ಮ ಉಳಿವಿನ ಭಾವನೆಗೆ ಬೇಕಾಗಿರುವ ಚಕ್ರವಾಗಿರುವುದಾರಿಂದ ಅಸಂತುಲಿತ ಚಕ್ರವನ್ನು ಪುನಃ ಸಂತುಲಿತಗೊಳಿಸುವುದು ಬಹುಮುಖ್ಯವಾಗಿದೆ. ನಮ್ಮ ಜೀವನದ ಏರಿಳಿತ, ಪರಿಸ್ಥಿತಿಗನುಗುಣವಾಗಿ ಚಕ್ರಗಳ ಆರೋಗ್ಯವೂ ಏರುಪೇರಾಗುವುದು ಸರ್ವೇ ಸಾಮಾನ್ಯ. ಆದರೆ ಅದನ್ನು ಗಮನಿಸಿ, ಕೆಲವೊಂದು ನಿಯಮಿತ ಅಭ್ಯಾಸಗಳೊಂದಿಗೆ ಚಕ್ರಗಳ ಆರೋಗ್ಯವನ್ನು ಪುನಃ ಸ್ಥಾಪಿಸಬಹುದು. ಅದರಲ್ಲಿ ಕೆಲವೊಂದು ಅಭ್ಯಾಸಗಳನ್ನು ಇಲ್ಲಿ ವಿವರಿಸಿದ್ದೇನೆ.

೧. ಮಂತ್ರ:

ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ಇದನ್ನು ಗುರುತಿಸಿ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ಮೂಲಾಧಾರ ಚಕ್ರದ ಮಂತ್ರ ‘ ಲಂ ‘. ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ಮೂಲಾಧಾರ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು.

೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:

ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದುನಾನು Congratulations

  • ನಾನು ಆಳವಾದ ಬೇರುಗಳನ್ನು ಬಿಟ್ಟಿದ್ದೇನೆ
  • ನಾನು ಸುರಕ್ಷಿತವಾಗಿದ್ದೇನೆ
  • ವಿಶ್ವವು ನನ್ನ ಬೆಂಬಲಕ್ಕಿದೆ
  • ನನ್ನನ್ನು ನಾನು ಪ್ರೀತಿಸುತ್ತೇನೆ

ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.

೩. ಮೂಲಾಧಾರ ಚಕ್ರದ grounding ಧ್ಯಾನ
pexels-photo-775417-775417.jpg

ಮನುಜ ಕುಲಕ್ಕೆ ಧ್ಯಾನ ಒಂದು ಅಧ್ಭುತ ಕೊಡುಗೆ. ಧ್ಯಾನದಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನಿರ್ದಿಷ್ಟವಾಗಿ ಮೂಲಾಧಾರ ಚಕ್ರವನ್ನು ಸಕ್ರಿಯಗೊಳಿಸಲು ಕೆಲವು ಧ್ಯಾನ ಕ್ರಮಗಳಿವೆ. ಅದು ಸಾಧ್ಯವಾಗದೇ ಹೋದರೆ ನಿಸರ್ಗದ ಮಡಿಲಲ್ಲಿ, ನಿಮ್ಮ ಮನೆಯ ತಾರಸಿಯ ಮೇಲೆ ದಿನವೂ ಒಂದಿಷ್ಟು ಹೊತ್ತು ಧ್ಯಾನ ಮಾಡಲು ಕುಳಿತುಕೊಳ್ಳಿ. ಧ್ಯಾನ ಮಾಡುವಾಗ ಲಂ ಬೀಜಮತ್ರವನ್ನು ಪಠಿಸಿ ಅಥವಾ ಕೇಳಿ.

೪. ಬರಿಗಾಲಿನಲ್ಲಿ ನಡೆಯುವುದು:
g9b9fd7c3a02b639030e7d8ca5e7cf7792a81331c5758bf31d682df6337265fa554476ff6d39106902d1a668896cfc2cc353898bd1509fea57e8df9edc29ac6e5_1280-6545757.jpg

ಈಗಾಗಲೇ ನಿಮಗೆ ತಿಳಿದಿರುವಂತೆ ಮೂಲಾಧಾರ ಚಕ್ರ ಭೂತತ್ವಕ್ಕೆ ಸಂಬಂಧಿಸಿದ ಚಕ್ರವಾಗಿದೆ. ಅಂದರೆ ಇದರ ಉತ್ತಮ ಕಾರ್ಯ ಕ್ಷಮತೆಗಾಗಿ ಭೂಮಿಗೆ ಸಂಬಂಧಿಸಿದ ಅಂಶಗಳನ್ನು ನಿಮ್ಮಲ್ಲಿ ಹೆಚ್ಚು ಹೆಚ್ಚು ಸೇರಿಸಿಕೊಳ್ಳುವುದು. ಬರಿಗಾಲಿನಲ್ಲಿ ಬೆಳಗಿನ ಸಮಯ ಹುಲ್ಲುಗಾವಲಿನಲ್ಲಿ ಅಥವಾ ಮಣ್ಣಿನಲ್ಲಿ ನಡೆಯುವುದರಿಂದ ಭೂ ತಾಯಿಯ ಸ್ಪರ್ಶ ನೇರವಾಗಿ ನಿಮಗೆ ದೊರೆಯುವುದು. ಇದು ನಿಮ್ಮ ಮೂಲಾಧಾರ ಚಕ್ರದ ಆರೋಗ್ಯಕ್ಕೆ ಬಹಳ ಉತ್ತಮ.

೫. ನಿಸರ್ಗದ ಜೊತೆ ಉತ್ತಮ ಬಾಂಧವ್ಯ:
pexels-photo-1535288-1535288.jpg

ಇಂದಿನ ದಿನಗಳಲ್ಲಿ ನಮ್ಮ ಮನೆಯ ಕೋಣೆಯಲ್ಲಿ ನಮ್ಮ ಫೋನ್, ಲ್ಯಾಪ್ ಟಾಪ್ ಮುಂತಾದ ಉಪಕರಣಗಳ ಜೊತೆ ಹೆಚ್ಚು ಸಮಯ ಕಳೆಯುತ್ತೇವೆ. ಮೂಲಾಧಾರ ಚಕ್ರ ದುರ್ಬಲಗೊಳ್ಳಲು ಇದೂ ಒಂದು ಕಾರಣ. ಹಾಗಾಗಿ ಹೊರಗೆ ಹೋಗಿ, ನಿಸರ್ಗದ ಜೊತೆ ಉತ್ತಮ ಬಾಂಧವ್ಯ ಬೆಳೆಸಿ. ಚಾರಣ ಮಾಡಿ, ಸಾಧ್ಯವಿಲ್ಲವೇ? ನಿಮ್ಮ ಮನೆಯ ಸುತ್ತ, ಉದ್ಯನಗಳಲ್ಲಿರುವ ಗಿಡ ಮರಗಳನ್ನು ಮುಟ್ಟಿ, ಮಾತನಾಡಿ, ಮಳೆಯಲ್ಲಿ ನೆನೆದು ನೋಡಿ, ಬಿಸಿಲಿಗೆ ಮೈ ಒಡ್ಡಿ. ಹಸು, ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರಿ. ಮತ್ತು ನಿಮಗೆ ನಿಸರ್ಗ ಅದರ ಹತ್ತು, ನೂರು ಪಟ್ಟು ಪ್ರೀತಿ ತೋರುತ್ತದೆ.

೬. ಕೆಂಪು ಬಣ್ಣ:
pexels-photo-960137-960137.jpg

ಈ ಚಕ್ರವು ಕೆಂಪು ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ಕೆಂಪು ಬಣ್ಣ ಬಳಸಿ, ಕೆಂಪು ಪರದೆ, ಕೆಂಪು ಬಣ್ಣದ ಧ್ಯಾನದ ಆಸನ, ಇತ್ಯಾದಿ. ಕೆಂಪು ಬಣ್ಣದ ಬಟ್ಟೆಯನ್ನೂ ಹೆಚ್ಚು ಹೆಚ್ಚು ಬಳಸಬಹುದು.

೭. ರೇಕಿ

ರೇಕಿಯನ್ನು ಮೂಲಾಧಾರ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.

೮. ಯೋಗಾಸನ
gdaa3fbf40d9d1afdc197dba2425d428e5b0233f9f4c681d4486849ac5078072e9334a73a782742fdc53cad72dca494ca04468ff736af4a9e1a9bb823192eb8af_1280-2573216.jpg

ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ಮೂಲಾಧಾರ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ವೃಕ್ಷಾಸನ, ಸೂರ್ಯ ನಮಸ್ಕಾರ, ಉತ್ತಾನಾಸನ, ತಾಡಸನ, ಅರ್ಧ ಸೇತು ಬಂಧಾಸನ, ಶಶಾಂಕಾಸನ, ಮಲಾಸನ, ಶವಾಸನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು.

ಕೊನೆಯದಾಗಿ…

ಸಂತುಲಿತ ಮೂಲಾಧಾರ ಚಕ್ರ ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಧನಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ದಿನಚರಿಯಲ್ಲಿ ಕನಿಷ್ಠ ಒಂದಿಷ್ಟು ಸಮಯವನ್ನಾದರೂ ಇದರ ಸಬಲತೆಗೆ ಬಳಸಿದರೆ ಉತ್ತಮ ಜೀವನ ನಿಮ್ಮದಾಗಲು ಯಾವುದೇ ಸಂದೇಹವಿಲ್ಲ.


Discover more from cosmiqgrace.com

Subscribe to get the latest posts sent to your email.

3 comments

Leave a Reply

Author

cosmiqgrace@gmail.com

Related Posts