ನಮ್ಮ ದೇಹದ ಚಕ್ರ ವ್ಯವಸ್ಥೆ ಯಲ್ಲಿ ಸಹಸ್ರಾರ ಚಕ್ರ ಏಳನೇಯದು ಮತ್ತು ಅತ್ಯುನ್ನತ ಮಟ್ಟದ್ದು. ಇದು ನಮ್ಮ ಭೌತಿಕ ದೇಹ ಮತ್ತು ಆಧ್ಯಾತ್ಮಿಕ ಜಗತ್ತಿನ ನಡುವೆಯ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತದೆ. 

ಸಹಸ್ರಾರ ಚಕ್ರ ಎಂದರೇನು?

ಸಹಸ್ರಾರ ಅಂದರೆ ಸಂಸ್ಕೃತದಲ್ಲಿ “ಸಾವಿರ” ಎಂದು ಅರ್ಥ.  ಸಹಸ್ರಾರ ಚಕ್ರವು ಸಾವಿರ ದಳಗಳುಲ್ಲ ಕಮಲದಂತೆ ಕಾಣುವುದರಿಂದ ಅದಕ್ಕೆ ಈ ಹೆಸರು ನೀಡಲಾಗಿದೆ. ಪ್ರತಿಯೊಂದು ದಳಗಳು ನಮ್ಮ ಜೀವನದ ವಿವಿಧ ಅಂಶಗಳನ್ನು ಸೂಚಿಸುತ್ತದೆ. ಈ ಎಲ್ಲಾ ದಳಗಳು ತೆರೆದುಕೊಂಡಾಗ ನಮ್ಮ ಜೀವನದಲ್ಲಿ ಸಂಪೂರ್ಣ ಸಮತೋಲನ ಮತ್ತು ಜ್ಞಾನೋದಯ ಉಂಟಾಗುತ್ತದೆ. 

ಪ್ರಜ್ಞೆಯು ಈ ಚಕ್ರದ ವರೆಗೂ ಹೋದರೆ ಇಲ್ಲಿ ನಮ್ಮ ಜೀವನದ ಉನ್ನತ ಉದ್ದೇಶವಾದ ಆಧ್ಯಾತ್ಮಿಕತೆ, ಜ್ಞಾನೋದಯ, ದೈವೀ ಮಾರ್ಗದರ್ಶನ ಮುಂತಾದವು ಉಂಟಾಗುತ್ತದೆ. 

ಸಹಸ್ರಾರ ಚಕ್ರ ಎಲ್ಲಿದೆ?

ಸಹಸ್ರಾರ ಚಕ್ರವು ನಮ್ಮ ತಲೆಯ ಮೇಲ್ಭಾಗದಲ್ಲಿ ನೆಲೆಗೊಂಡಿದೆ. ಹಾಗಾಗಿ ನಮ್ಮ ಮತ್ತು ಉನ್ನತವಾದ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಈ ಚಕ್ರದ ಕಾರ್ಯವಾಗಿದೆ. 

ಸಹಸ್ರಾರ ಚಕ್ರದ ಗುಣಲಕ್ಷಣಗಳು

ಬಣ್ಣ : ನೇರಳೆ

ಚಿನ್ಹೆ:

ಕಂಪನ :  963 hz

ತತ್ವ : ಪ್ರಜ್ಞೆ

ಬೀಜ ಮಂತ್ರ : ಓಂ

ಸಹಸ್ರಾರ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ

ಸಹಸ್ರಾರ ಚಕ್ರವು ಅತ್ಯುನ್ನತ ಮಟ್ಟದ ಶಕ್ತಿ ಕೇಂದ್ರವಾಗಿದ್ದು ಇದರ ತತ್ವ ಪ್ರಜ್ಞೆಯೆಂದು ಪರಿಗಣಿಸಲಾಗಿದೆ. ಪ್ರಜ್ಞೆಯು ಮನುಷ್ಯನ ಉನ್ನತ ಮಟ್ಟದ ಅರಿವಾಗಿದೆ. ಈ ಚಕ್ರವು ತೆರೆದುಕೊಳ್ಳ ಬೇಕೆಂದರೆ ಕುಂಡಲಿನಿ ಶಕ್ತಿಯು ಈ ಚಕ್ರದವರೆಗೂ ಬಂದು ನಿಲ್ಲಬೇಕು. ಇಲ್ಲಿ ವ್ಯಕ್ತಿಗೆ ತನ್ನ ಅಂತರ್ ದೃಷ್ಟಿಯಲ್ಲಿ ಯಾವುದೇ ಅನುಮಾನವಿರುವುದಿಲ್ಲ ಮತ್ತು ಮುಂದಾಗುವುದನ್ನು ಸಹ ಕರಾರುವಕ್ಕಾಗಿ ನೊಡಬಲ್ಲವನಾಗುತ್ತಾನೆ.

ಜೀವನದ ನಿಜವಾದ ಉದ್ದೇಶ ಸಾಧನೆಯಲ್ಲಿ ಯಾವುದೇ ಅನುಮಾನ ಅಥವಾ ಭಯ ವ್ಯಕ್ತಿಗೆ ಕಾಡುವುದಿಲ್ಲ. ತನ್ನ  ಜೀವನದ ಎಲ್ಲ ಮಜಲುಗಳನ್ನು ಮೂರನೇ ವ್ಯಕ್ತಿಯಂತೆ ನೋಡಿ ಗ್ರಹಿಸುತ್ತಾನೆ. ತಾನು ಯಾರು? ಎಲ್ಲಿಂದ ಬಂದಿರುವೆ? ನನ್ನ ಈ ಜೀವನದ ಉದ್ದೇಶವೇನು? ನಾನು ಮುಂದೆ ಎಲ್ಲಿಗೆ ಹೋಗಲಿರುವೆ? ಇಂತಹ ಪ್ರಶ್ನೆಗಳಿಗೆ ಆರಾಮವಾಗಿ ಉತ್ತರ ಕಂಡುಕೊಳ್ಳುತ್ತಾನೆ.

ಅದಲ್ಲದೆ ಈ ಚಕ್ರವು ದೇಹದ ಅಂತಃ ಸ್ರಾವಾಕ ಗ್ರಂಥಿಗಳ ಮೇಲೆ ನಿಯಂತ್ರಣ ಹೊಂದಿದೆ. ಈ ಗ್ರಂಥಿಗಳೆಂದರೆ ಹೈಪೋಥಲಮಸ್, ಪಿಟ್ಯೂಟರಿ ಮತ್ತು ಪೀನಲ್ ಗ್ರಂಥಿಗಳು. ಇವೆಲ್ಲವೂ ನಮ್ಮ ದೇಹದಲ್ಲಿ ಬೇಕಾಗುವ ಕೆಲವೊಂದು ಹಾರ್ಮೋನುಗಳು, ರಾಸಾಯನಿಕಗಳನ್ನು ಉತ್ಪತ್ತಿ ಮಾಡುವ ಅಂಗಗಳು. ಹಾಗಾಗಿ ನಮ್ಮ ದೈಹಿಕ ಆರೋಗ್ಯಕ್ಕೆ ಸಹ ಸಹಸ್ರಾರ ಚಕ್ರದ ಕೊಡುಗೆ ಇದೆ. 

ಸಂತುಲಿತ ಸಹಸ್ರಾರ ಚಕ್ರ

ಸಹಸ್ರಾರ ಚಕ್ರವು ಸಂತುಲಿತ ಹಾಗೂ ತೆರೆದುಕೊಂಡಾಗ ವ್ಯಕ್ತಿಯು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ಸಂತೋಷವಾಗಿರುತ್ತಾನೆ. ದೇಹದ ಅಂತಃ ಸ್ರಾವಕ ಗ್ರಂಥಿಗಳು ದೇಹದ, ಮನಸ್ಸಿನ ಯೋಗಕ್ಷೇಮಕ್ಕೆ ಬೇಕಾದ ಎಲ್ಲ ರಾಸಾಯನಿಕ, ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಕೊನೆಯ ಚಕ್ರವು ಸಕ್ರಿಯವಾದರೆ ವ್ಯಕ್ತಿಯಲ್ಲಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತಾನೆ.

  • ಮಾನಸಿಕ ಸಮತೋಲನ
  • ಆಧ್ಯಾತ್ಮ ಅರಿವು.
  • ಜೀವನದ ನಿಜವಾದ ಮತ್ತು ಕೊನೆಯ ಉದ್ದೇಶದ ಅರಿವು
  • ಸ್ಪಷ್ಟ ಅಂತರ್ದೃಷ್ಟಿ
  • ಹೆಚ್ಚಿನ ದಯೆ ಮತ್ತು ಕನಿಕರ
  • ಹೆಚ್ಚಿದ ನಿದ್ರೆಯ ಗುಣಮಟ್ಟ.
ಅಸಂತುಲಿತ ಸಹಸ್ರಾರ ಚಕ್ರ

ಸಹಸ್ರಾರ ಚಕ್ರ ಮುಚ್ಚಿ ಕೊಂಡರೆ ಅಥವಾ ಅಸಂತುಲಿತ ಗೊಂಡರೆ ಅದು ನೇರವಾಗಿ ಮೆದುಳಿನ ಕಾರ್ಯದ ಮೇಲೆ ಪ್ರಭಾವ ಬೀರುವುದರಿಂದ ಕೆಲವೊಂದಿಷ್ಟು ಅಸ್ವಸ್ಥತೆಗಳನ್ನು ಅನುಭವಿಸಬೇಕಾಗಬಹುದು. ಅವುಗಳಲ್ಲಿ ದೈಹಿಕ ಮತ್ತು ಮಾನಸಿಕ ಲಕ್ಷಣಗಳನ್ನು ಕೆಳಗೆ ವಿಂಗಡಿಸಿ ನೀಡಲಾಗಿದೆ.

ದೈಹಿಕ ಲಕ್ಷಣಗಳು
  • ಮೈಗ್ರೇನ್ ಮುಂತಾದ ತಲೆನೋವುಗಳು
  • ನಿದ್ರಾಹೀನತೆ
  • ಸುಸ್ತು
  • ಹೆಚ್ಚು ಬೆಳಕು ಮತ್ತು ಶಬ್ದದ ಬಗ್ಗೆ ಸಂವೇದನಾಶೀಲತೆ.
  • ದೇಹದ ಸಮನ್ವಯತೆಯ ಕೊರತೆ
ಮಾನಸಿಕ ಲಕ್ಷಣಗಳು
  • ಜೀವನದ ಉದ್ದೇಶ ದ ಬಗ್ಗೆ ತಿಳುವಳಿಕೆ ಇಲ್ಲದಿರುವುದು
  • ಯಾವುದೇ ನಿರ್ಧಾರ ಮಾಡಲಾಗದ ಮನಸ್ಥಿತಿ
  • ಆಧ್ಯಾತ್ಮ ಸಾಧನೆಗೆ ಅಡ್ಡಿ
  • ಖಿನ್ನತೆ / ಅಥವಾ ಕೇವಲ ಹೊರ ಜಗತ್ತಿನ ಸಂಪರ್ಕ ಕಡಿತದ ಉದ್ದೇಶಕ್ಕಾಗಿ ಅತಿ ಹೆಚ್ಚು ಆಧ್ಯಾತ್ಮದ ಕಡೆ ವಾಲುವುದು 
  • ಏಕಾಗ್ರತೆಯ ಕೊರತೆ
ಆಸಂತುಲಿತ ಸಹಸ್ರಾರ ಚಕ್ರವನ್ನು ಸಂತುಲಿತಗೊಳಿಸುವುದು.

ಈಗಾಗಲೇ ಸಹಸ್ರಾರ ಚಕ್ರದ ಸಕ್ರಿಯ ಚಲನೆ ನಮ್ಮ ದೇಹ – ಮನಸ್ಸಿನ ಆರೋಗ್ಯಕ್ಕೆ ಎಷ್ಟು ಮುಖ್ಯವೆಂದು ನಿಮಗೆಲ್ಲಾ ತಿಳಿದಿದೆ. ಯಾವಾಗ ಸಮಸ್ಯೆ ಯ ಮೂಲಕಾರಣ ತಿಳಿಯುವುದೋ, ಆಗ ಅರ್ಧ ಸಮಸ್ಯೆ ಪರಿಹಾರವಾದಂತೆ. ಏಕೆಂದರೆ ಈಗ ನೀವು ಸಮಸ್ಯೆ ಮೂಲ ಕಾರಣದ ಮೇಲೆ ಕೆಲಸ ಮಾಡಿದರೆ ಗುರಿ ಸಾಧನೆ ಬಹಳಷ್ಟು ಸುಲಭ. ಸಹಸ್ರಾರ ಚಕ್ರದ ಅಸಮರ್ಪಕ ಕಾರ್ಯ ನಿರ್ವಹಣೆ ದೇಹ ಮನಸ್ಸಿನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲದು. ಹಾಗಾಗಿ ಅದನ್ನು ಸಮತೋಲನ ಗೊಳಿಸುವ ಕೆಲವೊಂದಿಷ್ಟು ಉಪಾಯಗಳನ್ನು ಕೆಳಗೆ ಪಟ್ಟಿ ಮಾಡಿದ್ದೇನೆ. 

೧. ಮಂತ್ರ: 

ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ನಂತರ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ಸಹಸ್ರಾರ ಚಕ್ರದ ಮಂತ್ರ ‘ಓಂ’.  ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ಸಹಸ್ರಾರ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು.

೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:

ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದು.

  • “ನಾನು ಸ್ವತಃ ಆ ದೈವೀ ಶಕ್ತಿಯ ಒಂದು ಭಾಗ.”
  • “ನನ್ನಲ್ಲಿರುವ ಆ ದೈವೀ ಶಕ್ತಿಯನ್ನು ನಾನು ಗೌರವಿಸುತ್ತೇನೆ .”
  • “ದೈವಿಕ ಮಾರ್ಗದರ್ಶನದಂತೆ ನಾನು ನನ್ನ ಕೆಲಸವನ್ನು ಮಾಡುತ್ತೇನೆ.”
  • “ನನ್ನ ಜೀವಾತ್ಮವನ್ನು ಪರಿಪಕ್ವಗೊಳಿಸುವ ಅನುಭವವನ್ನು ನಾನು ಸ್ವಾಗತಿಸುತ್ತೇನೆ.”
  • “ನನ್ನ ಅಂತರ್ದೃಷ್ಟಿಯನ್ನು ನಾನು ನಂಬುತ್ತೇನೆ.”
  • “ಈ ಬ್ರಹ್ಮಾಂಡವೇ ನನ್ನ ಗುರು.”

ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.

೩. ಧ್ಯಾನ.

ಆನ ಪಾನ ಸತಿ ಇತ್ಯಾದಿ ಧ್ಯಾನವು ಸಹಸ್ರಾರ ಚಕ್ರವನ್ನು ಸಂತುಲಿತ ಗಳಿಸಲು ಒಂದು ಉತ್ತಮ ಸಾಧನವಾಗಿದೆ. ಇದರ ಜೊತೆಗೆ ಇತರ ಧ್ಯಾನ ವಿಧಾನಗಳನ್ನು ಪ್ರಯತ್ನಿಸಬಹುದು. ಇಂತಹ ಧ್ಯಾನಗಳು ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸುವುದರಿಂದ ಸಹಸ್ರಾರ ಚಕ್ರದ ಸಂತುಲತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.

೪.  ನೇರಳೆ ಬಣ್ಣದ ಬಳಕೆ:

ಈ ಚಕ್ರವು ನೇರಳೆ ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ನೇರಳೆ ಬಣ್ಣ ಬಳಸಿ. ನೇರಳೆ ಪರದೆ, ನೇರಳೆ ಬಣ್ಣದ ಧ್ಯಾನದ ಆಸನ, ಇತ್ಯಾದಿ.  ನೇರಳೆ ಬಟ್ಟೆಯನ್ನೂ ಹೆಚ್ಚು ಹೆಚ್ಚು ಧರಿಸಬಹುದು.

೫. ರೇಕಿ

ರೇಕಿಯನ್ನು ಸಹಸ್ರಾರ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.

೬. ಯೋಗಾಸನ

ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ವಿಶುದ್ಧ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ಶೀರ್ಷಾಸನ, ಹಲಾಸನ, ಬಾಲಸಾನ, ಅಧೋ ಮುಖ ಶ್ವಾನಾಸನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು. 

ಕೊನೆಯದಾಗಿ..

ಸಹಸ್ರಾರ ಚಕ್ರದಲ್ಲಿ ಮನುಷ್ಯನ ಅತ್ಯುನ್ನತ ಪ್ರಜ್ಞೆ ಅಡಕವಾಗಿದೆ. ಇಲ್ಲಿ ವ್ಯಕ್ತಿಯು ತನ್ನ ಮತ್ತು ವಿಶ್ವದ ಯಾವುದೇ ಜೀವಿಯ ಮಧ್ಯೆ ವ್ಯತ್ಯಾಸ ನೋಡುವುದಿಲ್ಲ. ತಾನೇ ವಿಶ್ವ, ವಿಶ್ವವೇ ತಾನು ಎಂಬ ಪ್ರಜ್ಞೆಯನ್ನು ಹೊಂದುತ್ತಾನೆ. ಈ ಅತ್ಯುನ್ನತ ಮಟ್ಟದ ಪ್ರಜ್ಞೆಯನ್ನು ಹೊಂದುವುದೇ ಮನುಜನ ಕೊನೆಯ ಗುರಿಯಾಗಿರುತ್ತದೆ. 


Discover more from cosmiqgrace.com

Subscribe to get the latest posts sent to your email.

Leave a Reply

Author

cosmiqgrace@gmail.com

Related Posts