ವಿಶುದ್ಧ ಚಕ್ರ ಎಂದರೇನು?
ವಿಶುದ್ಧ ಇದರ ಅರ್ಥ ಶುದ್ಧಗೊಳಿಸುವುದು. ಹೊಸ ಗಾಳಿಯನ್ನು ಉಸಿರಾಟದ ಮೂಲಕ ಒಳಗೆ ತೆಗೆದು ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರ ಹಾಕುವ ಮೂಲಕ ಭೌತಿಕ ಮತ್ತು ಸೂಕ್ಷ್ಮ ಶರೀರವನ್ನು ಶುದ್ಧ ಪಡಿಸುವ ಜೊತೆಗೆ ನಮ್ಮ ಆಲೋಚನೆ, ಕ್ರಿಯೆ ಮತ್ತು ಮಾತನ್ನೂ ಶುದ್ಧಪಡಿಸುತ್ತದೆ. ಇದು ನಮ್ಮ ಗಂಟಲಿನ ಭಾಗದಲ್ಲಿರುವುದರಿಂದ ಇದು ಸಂವಹನ ಕಲೆ, ಅಭಿವ್ಯಕ್ತಿ ಸಾಮರ್ಥ್ಯ, ಹಾಡುಗಾರಿಕೆ ಮುಂತಾದವುಗಳ ಮೇಲೆ ನಿಯಂತ್ರಣ ಹೊಂದಿದೆ. ಮೌಖಿಕ ಮತ್ತು ಶಾರೀರಿಕ ಅಭಿವ್ಯಕ್ತಿ ಕೂಡ ಇದೆ ಚಕ್ರದ ನಿಯಂತ್ರಣದಲ್ಲಿರುತ್ತದೆ.
ವಿಶುದ್ಧ ಚಕ್ರ ಎಲ್ಲಿದೆ?
ವಿಶುದ್ಧ ಚಕ್ರದ ಸ್ಥಳ ಕತ್ತಿನ ಕೆಳಭಾಗದಲ್ಲಿ, ಧ್ವನಿ ಪೆಟ್ಟಿಗೆಯ ಮಧ್ಯದಲ್ಲಿ. ಹಾಗಾಗಿ ಇದು ನಮ್ಮ ಸಂವಹನ, ಧ್ವನಿಪೆಟ್ಟಿಗೆ, ನಾಲಿಗೆ ಮುಂತಾದ ಅಂಗಗಳ ಜೊತೆ ಅದರ ಸುತ್ತ ಮುತ್ತಲಿನ ಥೈರಾಯ್ಡ್ ಗ್ರಂಥಿಗಳ ಮೇಲೂ ಪರಿಣಾಮ ಬೀರುತ್ತದೆ. ಇಲ್ಲಿ ಸಂವಹನವೆಂದರೆ ಕೇವಲ ಬೇರೆಯವರೊಂದಿಗೆ ಮಾತ್ರವಲ್ಲ, ತನ್ನ ಜೊತೆಗೆ ತಾನು ಉತ್ತಮವಾಗಿ ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಸೇರಿ ಸಂವಹನ ನಡೆಸಲು ಈ ವಿಶುದ್ಧ ಚಕ್ರದ ಸಹಕಾರ ಬೇಕೆ ಬೇಕು.
ವಿಶುದ್ಧ ಚಕ್ರದ ಗುಣ ಲಕ್ಷಣಗಳು
ವಿಶುದ್ಧ ಚಕ್ರದ ತತ್ವ ಆಕಾಶ ತತ್ವ. ಹಾಗಾಗಿ ಇದರ ಬಣ್ಣವೂ ನೀಲಿ. ಈ ಆಕಾಶ ತತ್ವಕ್ಕೆ ನಮ್ಮ ಆಲೋಚನೆ, ಭಾವನೆಗೆ ಒಂದು ರೂಪ ಕೊಟ್ಟು ಅದನ್ನು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯವಿದೆ. ವಿಶುದ್ಧ ಚಕ್ರದ ಗುಣಲಕ್ಷಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಬಣ್ಣ: ನೀಲಿ
ಚಿನ್ಹೆ :
ಕಂಪನ : 741 hz
ಬೀಜಮಂತ್ರ: ಹಂ
ತತ್ವ : ಆಕಾಶ
ವಿಶುದ್ಧ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ
ವಿಶುದ್ಧ ಚಕ್ರವು ಉಸಿರಾಟದ ವೇಳೆ ಉದಾನ ಪ್ರಾಣವನ್ನು ದೇಹದೆಲ್ಲೆಡೆ ಕಳುಹಿಸಿ ದೇಹವನ್ನು ವಿಷಕಾರಿ ಅಂಶಗಳಿಂದ ಶುದ್ಧಪಡಿಸುತ್ತದೆ. ಇದೇ ಕ್ರಿಯೆಯಿಂದ ಈ ಚಕ್ರಕ್ಕೆ ವಿಶುದ್ಧಿ ಚಕ್ರ ಎಂದು ಹೆಸರಿಸಲಾಗಿದೆ.
ಚಕ್ರದ ಚಿನ್ಹೆಯಲ್ಲಿ ಕಾಣಸಿಗುವ ಹದಿನಾರು ದಳಗಳುಳ್ಳ ಕಮಲವು ಸಂಸ್ಕೃತ ಭಾಷೆಯ ಹದಿನಾರು ಸ್ವರಗಳನ್ನು ಸೂಚಿಸುತ್ತವೆ. ಅಂದರೆ ಈ ಚಕ್ರವು ಸ್ವರಗಳ ಉಗಮ ಸ್ಥಳವಾಗಿದೆ. ಕೆಳಮುಖವಾಗಿರುವ ತ್ರಿಕೋನವು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿದೆ.
ವಿಶುದ್ಧ ಚಕ್ರವು ಮೇಲಿನ ಮೂರು ಚಕ್ರಗಳಲ್ಲಿ ಮೊದಲನೆಯದಾಗಿರುವುದರಿಂದ ಇಲ್ಲಿಂದಲೇ ಆಧ್ಯಾತ್ಮಿಕ ಜಗತ್ತಿಗೆ ದ್ವಾರ ತೆರೆದುಕೊಳ್ಳುತ್ತದೆ. ತ್ರಿಕೋನದ ಕೆಳಭಾಗವು ಅದನ್ನೇ ಸೂಚಿಸುತ್ತದೆ ಮತ್ತು ಮೇಲೆ ಹೋದಂತೆ ಆಧ್ಯಾತ್ಮಿಕ ಜ್ಞಾನವು ಹೆಚ್ಚಾಗುತ್ತಾ ಹೋಗುತ್ತದೆ. ನಿಮಗೆ ತಿಳಿದಿರುವಂತೆ ಧ್ವನಿಪೆಟ್ಟಿಗೆಯ ಬಳಿ ಇರುವ ಈ ವಿಶುದ್ಧ ಚಕ್ರವು ನೇರವಾಗಿ ನಮ್ಮ ಅಭಿವ್ಯಕ್ತಿ, ಸಂವಹನದ ಮೇಲೆ ಹಿಡಿತ ಸಾಧಿಸುತ್ತದೆ.
ಹಾಗೆಯೇ, ಆಧ್ಯಾತ್ಮಿಕವಾಗಿ ಬೆಳೆಯಲು, ನಮ್ಮನ್ನು ನಾವು ತಿಳಿದು ಸಂಪರ್ಕ ಸಾಧಿಸಿ ಸಂವಹನ ಮಾಡುವುದು ಅತ್ಯಗತ್ಯ. ನಮ್ಮ ಜೊತೆ ನಾವೇ ಸಂಪರ್ಕ ಸಾಧಿಸಲು ಸಹ ವಿಶುದ್ಧ ಚಕ್ರದ ಪಾತ್ರವಿದೆ. ಇನ್ನೊಂದು ಅರ್ಥದಲ್ಲಿ ನಮ್ಮ ನಿಜವಾದ ಗುರುತು ಕಂಡು ಹಿಡಿಯಲು ಈ ಚಕ್ರ ಸಹಕರಿಸುತ್ತದೆ.
ಹಾಗಾಗಿ ಇದು ಸತ್ಯ, ಸ್ಪಷ್ಟತೆ ಮುಂತಾದ ಗುಣಗಳೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಅಲ್ಲದೆ ಆಲೋಚನೆಯನ್ನು ಸೃಜಾನತ್ಮಕವಾಗಿ ವ್ಯಕ್ತಗೊಳಿಸಲು ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ಬೇಕಾಗಿರುವ ಜ್ಞಾನ, ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
ಕಲುಷಿತಗೊಂಡಿರುವ ಉಸಿರಾಡುವ ಗಾಳಿ ಮತ್ತು ಆರೋಗ್ಯಕರವಲ್ಲದ ಆಹಾರದಿಂದ ನಮ್ಮ ದೇಹ, ಮನಸ್ಸು ಆಗಾಗ ಕಲುಷಿತಗೊಳ್ಳುತ್ತಿರುತ್ತದೆ. ಅಂತಹ ಸಮಯದಲ್ಲಿ ವಿಶುದ್ಧ ಚಕ್ರವು ಕಾರ್ಯರೂಪಕ್ಕೆ ಬಂದು ಅದನ್ನು ಸ್ವಚ್ಛಗೊಳಿಸಿ ಪುನಃ ಶುದ್ಧಗೊಳಿಸುತ್ತದೆ.
ಸಂತುಲಿತ ವಿಶುದ್ಧ ಚಕ್ರ
ಸಂವಹನ ಕ್ರಿಯೆ ಎಲ್ಲಾ ಜೀವಿಗಳಿಗೂ ಅತ್ಯಗತ್ಯ. ಸಂವಹನವಿಲ್ಲವೆಂದರೆ ಜೀವನ ಕಷ್ಟ ಸಾಧ್ಯ. ಅದು ಬೇರೆಯವರೊಂದಿಗಿರಬಹುದು, ಅಥವಾ ನಮ್ಮೊಳಗೇ ಇರಬಹುದು. ಈಗ ವಿಶುದ್ಧ ಚಕ್ರವು ಸಮತೋಲನದಿಂದಿರುವಾಗ ವ್ಯಕ್ತಿಯು ಹೇಗೆ ನಡೆದು ಕೊಳ್ಳಬಹುದೆಂದು ಸಂಕ್ಷಿಪ್ತವಾಗಿ ನೋಡೋಣ.
- ಮಾತಿನಲ್ಲಿ ಸ್ಪಷ್ಟತೆ
- ಯಾವ ವಿಷಯದಲ್ಲಾದರೂ ಸುಲಲಿತವಾಗಿ ಮಾತನಾಡುವ ಕಲೆ
- ಬೇರೆಯವರ ಮಾತನ್ನೂ ಮನಸಿಟ್ಟು ಕೇಳುವುದು
- ಜ್ಞಾನ ಹಂಚುವುದು
- ಆಧ್ಯಾತ್ಮಿಕ ಬೆಳವಣಿಗೆಗೆ ತಮ್ಮ ತಾರ್ಕಿಕತೆ ಅಡ್ಡಿ ಪಡಿಸದಂತೆ ನೋಡಿಕೊಳ್ಳುವುದು.
ಅಸಂತುಲಿತ ವಿಶುದ್ಧ ಚಕ್ರ
ವಿಶುದ್ಧ ಚಕ್ರ ಅಸಮತೋಲನವಾದಾಗ ಸಂವಹನ ಕ್ರಿಯೆ ನಿಲ್ಲುತ್ತದೆ. ವ್ಯಕ್ತಿಯು ಇತರರನ್ನೂ, ತನ್ನ ಒಳಗಿನ ಧ್ವನಿಯನ್ನೂ ಕೇಳಿಸಿಕೊಳ್ಳಲು ವಿಫಲನಾಗುತ್ತನೆ. ಇದರಿಂದ ಅನೇಕ ಭಾವನಾತ್ಮಕ, ದೈಹಿಕ ಸಮಸ್ಯೆಗಳು ಕಾರಣವಾಗುತ್ತವೆ.
ದೈಹಿಕ ಲಕ್ಷಣಗಳು
- ಥೈರಾಯ್ಡ್ ಸಮಸ್ಯೆ
- ಗಂಟಲು ನೋವು
- ಕುತ್ತಿಗೆ ನೋವು
- ಆಗಾಗ್ಗೆ ಕಂಡುಬರುವ ತಲೆನೋವು
- TMJ
ಮಾನಸಿಕ ಲಕ್ಷಣಗಳು
- ತಮ್ಮ ಮನಸಿನ ವಿಚಾರಗಳನ್ನು ವ್ಯಕ್ತಪಡಿಸಲು ಹಿಂಜರಿಕೆ.
- ವ್ಯಕ್ತಪಡಿಸಿದರೂ ಕೂಡ ಅದು ಅಸ್ಪಷ್ಟವಾಗಿ ಇನ್ನೊಬ್ಬರಿಗೆ ಗೊಂದಲ ಉಂಟಾಗುವಂತೆ aಇರುವುದು.
- ತಮ್ಮ ವೈಯಕ್ತಿಕ ನಂಬಿಕೆಯನ್ನು ಬೇರೆಯವರ ಮೇಲೆ ಹೇರುವುದು.
- ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲ.
- ಪೂರ್ವಾಗ್ರಹ ಪೀಡಿರಾಗಿ ಪಕ್ಷಪಾತಿಯಾಗುವುದು.
- ಸೃಜನಶೀಲತೆಯ ಕೊರತೆ
- ತಾವೇ ಸರಿ ಎಂಬ ಭ್ರಮೆ.
ಅಸಂತುಲಿತ ವಿಶುದ್ಧ ಚಕ್ರವನ್ನು ಸಂತುಲಿತಗೊಳಿಸುವುದು.
ವಿಶುದ್ಧ ಚಕ್ರವು ನಮ್ಮೊಳಗಿನ ಅತ್ಮದೊಂದಿಗೆ ಸಂಪರ್ಕಿಸಿ, ನಮ್ಮ ನಿಜವಾದ ಗುರುತನ್ನು ಹುಡುಕಲು ಸಹಾಯ ಮಾಡುತ್ತದೆ. ಅದರ ಜೊತೆ ಹೊರ ಜಗತ್ತಿನಲ್ಲಿ ವ್ಯವಹರಿಸಲು ಸಹ ಉತ್ತಮ ವಿಶುದ್ಧ ಚಕ್ರವು ನಮ್ಮದಾಗಿರಬೇಕು. ಇದರಿಂದ ಆಧ್ಯಾತ್ಮಿಕ ಮತ್ತು ಲೌಕಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ವಿಶುದ್ಧ ಚಕ್ರದ ಜೊತೆ ಕೆಲಸ ಮಾಡಲು ಈ ಕೆಳಗಿನ ವಿಧಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
೧. ಮಂತ್ರ
ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ನಂತರ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ವಿಶುದ್ಧ ಚಕ್ರದ ಮಂತ್ರ ‘ಹಂ’. ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ವಿಶುದ್ಧ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು.
೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:
ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ವಿಶುದ್ಧ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದು.
“ನಾನು ಆತ್ಮವಿಶ್ವಾಸದೊಂದಿಗೆ ಸುಲಲಿತವಾಗಿ ಮಾತನಾಡುತ್ತೇನೆ.”
“ನನ್ನ ಆಲೋಚನೆಗಳನ್ನು ಸ್ಪಷ್ಟವಾಗಿ, ಸುಲಭವಾಗಿ ಹೇಳುತ್ತೇನೆ .”
“ನಾನು ಮಾತನಾಡುವುದು ಮತ್ತು ಕೇಳುವುದರ ಮಧ್ಯೆ ಸಮತೋಲನ ಕಾಯ್ದುಕೊಳ್ಳುತ್ತೇನೆ.”
“ನಾನು ಈ ಹಿಂದೆ ಮಾಡಿದ ತಪ್ಪುಗಳಿಗಾಗಿ ನನ್ನನ್ನು ನಾನು ಕ್ಷಮಿಸಿದ್ದೇನೆ.”
“ನಾನು ಸತ್ಯವನ್ನೇ ಹೇಳುತ್ತೇನೆ.”
“ನನ್ನ ಅಭಿಪ್ರಾಯ ಹಂಚಿಕೊಳ್ಳುವುದು ಬಹಳ ಮುಖ್ಯ ಮತ್ತು ಅಗತ್ಯವಾಗಿದೆ.”
ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.
೩. ವಿಶುದ್ಧ ಚಕ್ರದ ಧ್ಯಾನ
ಮನುಜ ಕುಲಕ್ಕೆ ಧ್ಯಾನ ಒಂದು ಅಧ್ಭುತ ಕೊಡುಗೆ. ಧ್ಯಾನದಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನಿರ್ದಿಷ್ಟವಾಗಿ ವಿಶುದ್ಧ ಚಕ್ರವನ್ನು ಸಕ್ರಿಯಗೊಳಿಸಲು ಕೆಲವು ಧ್ಯಾನ ಕ್ರಮಗಳಿವೆ. ಅದು ಸಾಧ್ಯವಾಗದೇ ಹೋದರೆ ಹಂ ಬೀಜಮತ್ರದ ಮೇಲೆ ಧ್ಯಾನ ಮಾಡಿರಿ.
೪. ನೀಲಿ ಬಣ್ಣದ ಬಳಕೆ
ಈ ಚಕ್ರವು ನೀಲಿ ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ನೀಲಿ ಬಣ್ಣ ಬಳಸಿ, ನೀಲಿ ಪರದೆ, ನೀಲಿ ಬಣ್ಣದ ಧ್ಯಾನದ ಆಸನ, ಇತ್ಯಾದಿ. ನೀಲಿ ಬಣ್ಣದ ಬಟ್ಟೆಯನ್ನೂ ಹೆಚ್ಚು ಹೆಚ್ಚು ಧರಿಸಬಹುದು.
೫. ರೇಕಿ
ರೇಕಿಯನ್ನು ವಿಶುದ್ಧ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.
೬. ಯೋಗಾಸನ
ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ವಿಶುದ್ಧ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ಹಲಾಸನ, ಸುಪ್ತ ಕೋನಾಸನ, ಸರ್ವಾಂಗಾಸನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು.
ಕೊನೆಯದಾಗಿ…
ವಿಶುದ್ಧ ಚಕ್ರದ ಶಕ್ತಿಯು ಸರಿಯಾಗಿ ಹರಿಯುತ್ತಿದ್ದರೆ ಈ ಚಕ್ರದ ಗರಿಷ್ಠ ಮಟ್ಟದ ಪ್ರಯೋಜನ ಪಡೆಯಬಹುದು. ನಮ್ಮ ಯೋಚನೆ, ಅಭಿಪ್ರಾಯಗಳು ಸೂಕ್ತವಾಗಿ ವ್ಯಕ್ತವಾದಾಗ ನಮ್ಮೊಳಗಿನ ಮತ್ತು ಹೊರಗಿನ ಸಂಬಂಧ, ಬಾಂಧವ್ಯಗಳು ಗಟ್ಟಿಗೊಳ್ಳುತ್ತದೆ.
Discover more from cosmiqgrace.com
Subscribe to get the latest posts sent to your email.