gfc6a8cc5c0535504827a5eeb9d311d8bb23871335e7f6bbf34c1694b19453fcc3ae255e9ef17895ce100a10bce3c356a05dc0d93abf924abae0a416f8e057527_1280-4552237.jpg

ಚಕ್ರ ಎಂದೊಡನೆ ನೆನಪಿಗೆ ಬರುವುದು ಯಂತ್ರ ಅಥವಾ ಯಂತ್ರಗೊಳೊಂಡಿರುವ ವಾಹನ. ಚಕ್ರ ಯಾವುದೇ ವಸ್ತುವನ್ನು ನಡೆಯುವಂತೆ ಮಾಡುತ್ತದೆ. ಅದೇ ರೀತಿ ನಮ್ಮ ದೇಹ ವ್ಯವಸ್ಥಿತವಾಗಿ ಕೆಲಸ ಮಾಡಲು, ಆರೋಗ್ಯದಿಂದಿರಲು ನಮ್ಮೊಳಗೆ ಬಹಳಷ್ಟು ಚಕ್ರಗಳು ಕೆಲಸ ಮಾಡುತ್ತಿವೆ. ಅವೆಲ್ಲ ನಮ್ಮ ದೇಹದ ಶಕ್ತಿ ಕೇಂದ್ರಗಳು. ಇವುಗಳ ಸಮತೋಲನ ಕಾಯ್ದಿರಿಸುವುದು ಅತ್ಯಂತ ಅಗತ್ಯ.ಈ ಚಕ್ರಗಳು ನಮ್ಮ ಸೂಕ್ಷ್ಮ ಶರೀರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ಸೂಕ್ಷ್ಮ ಶರೀರವನ್ನು ನೋಡಲು ಅಥವಾ ಮುಟ್ಟಲು ಸಾಧ್ಯವಿಲ್ಲ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹೇಳಿರುವ ಪ್ರಕಾರ, ಇಡ ಮತ್ತು ಪಿಂಗಳ ನಾಡಿಗಳು ಒಂದರ ಮೇಲೊಂದು ಬರುವ ಜಾಗವೇ ಚಕ್ರಗಳು. ಎಲ್ಲ ಚಕ್ರಗಳೂ ಸಹಿತ ನಮ್ಮ ಸೂಕ್ಷ್ಮ ಶರೀರದಲ್ಲಿ ಪ್ರಾಣ ಶಕ್ತಿಯನ್ನು ಹರಿಸುತ್ತದೆ. ಈ ಪ್ರಾಣ ಶಕ್ತಿಯೇ ನಮ್ಮ ಭೌತಿಕ ಶರೀರವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಹಾಗಾಗಿ ಈ ಬಿಂದುಗಳೇ ನಮ್ಮೆಲ್ಲಾ ಸಮಸ್ಯೆಗೆ ಕಾರಣ ಅಥವಾ ಪರಿಹಾರವಾಗಿ ಮಾರ್ಪಾಡಗುತ್ತವೆ.

ನಮ್ಮ ದೇಹದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚಕ್ರಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಅವುಗಳಲ್ಲಿ ೭ ಚಕ್ರಗಳು ಪ್ರಮುಖವಾಗಿವೆ. ಈ ಚಕ್ರಗಳು ನಮ್ಮ ದೇಹದ ಮಧ್ಯ ಭಾಗದಲ್ಲಿ ಬೆನ್ನುಮೂಳೆಯ ತುತ್ತ ತುದಿಯಿಂದ ಹಿಡಿದು ತಲೆಯ ಮೇಲ್ಭಾಗದವರೆಗೂ ನೆಲೆಗೊಂಡಿವೆ. ಒಂದೊಂದು ಚಕ್ರವೂ ಒಂದೊಂದು ಬಣ್ಣ, ಕಂಪನ, ಸಂಕೇತ, ಮತ್ತು ಶಬ್ದಕ್ಕೆ ಸಂಬಂಧಿಸಿದೆ.

ಇವು ನಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ, ಭಾವನಾತ್ಮಕ,ಆಧ್ಯಾತ್ಮಿಕ ಆರೋಗ್ಯ ಮುಂತಾದ ಎಲ್ಲಾ ಆಯಮಗಳಿಗೂ ಕಾರಣವಾಗಿವೆ. ಹಾಗಾಗಿಯೇ ಈ ಏಳೂ ಚಕ್ರಗಳನ್ನು ಸಕ್ರಿಯಗೊಳಿಸಿ, ಅವುಗಳ ಸಮತೋಲನ ಕಾಯ್ದಿರಿಸುವುದು ಆರೋಗ್ಯದಿಂದಿರುವ ಒಂದು ಸೂತ್ರ. ಚಕ್ರಗಳು ಕಟ್ಟಿಹೋದರೆ ಅಥವಾ ಅಸಮರ್ಪಕವಾಗಿ ಕಾರ್ಯ ನಿರ್ವಹಿಸತೊಡಗಿದರೆ ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತವೆ. ನಿಯಮಿತವಾಗಿ ಚಕ್ರಗಳ ಜೊತೆ ಕೆಲಸ ಮಾಡಿದರೆ ಅವುಗಳನ್ನು ಗುಣಪಡಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಾಧ್ಯವಿದೆ. ಹಾಗಾದರೆ ಈ ಏಳು ಚಕ್ರಗಳು ಯಾವುವು? ಅವು ನಮ್ಮ ಆರೋಗ್ಯದ ಯಾವ ಅಂಶದ ಮೇಲೆ ಪ್ರಭಾವ ಬೀರುತ್ತವೆ ಎಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಏಳು ಪ್ರಮುಖ ಚಕ್ರಗಳು

ಈ ಕೆಳಗಿನ ಏಳು ಚಕ್ರಗಳು ನಮ್ಮ ಜೀವನದ ಬಹುಮುಖ್ಯ ಅಂಗಗಳಾಗಿವೆ. ಇವುಗಳ ಪ್ರತಿ ಒಂದು ಸ್ಥಿತಿಯೂ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಈ ಚಕ್ರ ವ್ಯವಸ್ಥೆ ಒಂದು ಪ್ರತ್ಯೇಕ ಚಿಕಿತ್ಸಾ ವಿಧಾನವದರೂ ಇಂದು ಬಹುತೇಕ ಎಲ್ಲಾ ನೈಸರ್ಗಿಕ ಚಿಕಿತ್ಸಾ ಕ್ರಮಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ಈಗ ಆ ಏಳು ಚಕ್ರಗಳ ಬಗ್ಗೆ ಒಂದೊಂದಾಗಿ ತಿಳಿಯೋಣ.

ಮೂಲಾಧಾರ ಚಕ್ರ

ಹೆಸರೇ ಹೇಳುವಂತೆ ಇದು ಎಲ್ಲ ಚಕ್ರಗಳಿಗೂ ಅಡಿಪಾಯದ ರೀತಿ ಕಾರ್ಯ ನಿರ್ವಹಿಸುತ್ತದೆ. ಇದು ಬೆನ್ನುಮೂಳೆಯ ತುದಿಯಲ್ಲಿ ಕೆಳ ಮುಖವಾಗಿ ಇದೆ. ಕೆಂಪುಬಣ್ಣ ಮೂಲಾಧಾರ ಚಕ್ರವನ್ನು ಪ್ರತಿನಿಧಿಸುತ್ತದೆ. ಬಾಲ್ಯದಲ್ಲೇ ಈ ಚಕ್ರ ವಿಕಾಸಗೊಳ್ಳುತ್ತದೆ. ಮೂಲಭೂತವಾದ ಬದುಕುಳಿಯುವ ಸ್ವಭಾವ ಈ ಚಕ್ರದಿಂದ ಬರುತ್ತದೆ. ಹಿಂದೂ ಗ್ರಂಥಗಳ ಪ್ರಕಾರ ಗಣಪತಿಯು ಮೂಲಾಧಾರ ಚಕ್ರವನ್ನು ಆಳುತ್ತಾನೆ. ಇದು ಪಂಚಭೂತಗಳಲ್ಲಿ ಭೂಮಿಯನ್ನು ಪ್ರತಿನಿಧಿಸುತ್ತದೆ.

ಮೂಲಾಧಾರ ಚಕ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆ ವ್ಯಕ್ತಿ ಆತ್ಮವಿಶ್ವಾಸಿಯೂ, ಅಚಲನೂ,ದೈಹಿಕವಾಗಿ ಉತ್ತಮ ಆರೋಗ್ಯದಿಂದ ಕೂಡಿರುತ್ತಾನೆ. ಅದೇ ಮೂಲಾಧಾರ ಚಕ್ರ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ವ್ಯಕ್ತಿ ಯಾವುದೇ ಮಹತ್ವಾಕಾಂಕ್ಷೆ ಇಲ್ಲದ, ಅಸ್ಥಿರತೆಯಿಂದ ಕೂಡಿರುತ್ತಾನೆ. ಅಭದ್ರತೆಯ ಭಾವನೆಯೂ ಕಾಡುತ್ತಿರುತ್ತದೆ. ಮೂಲಾಧಾರ ಚಕ್ರದ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ಈ ಕೊಂಡಿಗೆ ಭೇಟಿ ನೀಡಿ

ಸ್ವಾಧಿಷ್ಠಾನ ಚಕ್ರ

ಇದು ಎರಡನೇ ಅತಿ ಮುಖ್ಯ ಚಕ್ರವಾಗಿದೆ. ಇದು ಇರುವುದು ಕೆಳಹೊಟ್ಟೆಯ ಭಾಗದಲ್ಲಿ ಹೊಕ್ಕಳಿಗಿಂತ ಸುಮಾರು ನಾಲ್ಕು ಬೆರಳು ಕೆಳಗೆ. ಸ್ವಯಂ ಪ್ರೀತಿ, ಸ್ವಯಂ ಮೌಲ್ಯ, ಮೂಲಭೂತ ಲೈಂಗಿಕ ಅಗತ್ಯತೆಗಳು ಮತ್ತು ಸೃಜನಶೀಲತೆ ಇದರ ಸ್ವಭಾವ. ಇದನ್ನು ಆಳುವ ದೇವತೆ ಬ್ರಹ್ಮ. ಮತ್ತು ಇದು ಪ್ರತಿನಿಧಿಸುವ ಪಂಚಭೂತವೆಂದರೆ ನೀರು. ಪ್ರತಿನಿಧಿಸುವ ಬಣ್ಣ ಕಿತ್ತಳೆ ಬಣ್ಣ.

ಸಮರ್ಪಕ ಸ್ವಾಧಿಷ್ಠಾನ ಚಕ್ರ ಒಬ್ಬ ವ್ಯಕ್ತಿಯನ್ನು ಸಹಾನುಭೂತಿಶೀಲನೂ, ಧನಾತ್ಮಕ ಚಿಂತನೆ ಉಳ್ಳವನಾಗಿಯೂ, ಸೃಜನಶೀಲನಾಗಿಯೂ, ತೃಪ್ತ ವ್ಯಕ್ತಿಯಾಗಿಯೂ ಮಾಡುತ್ತದೆ. ಆದರೆ ಅಸಮರ್ಪಕ ಸ್ವಾಧಿಷ್ಠಾನ ಚಕ್ರವು ಅದೇ ವ್ಯಕ್ತಿಯನ್ನು ಇದರ ವಿರುದ್ದ ಸ್ವಭಾವದಿಂದ ತುಂಬಿಸುತ್ತದೆ. ಸ್ವಾಧಿಷ್ಠಾನ ಚಕ್ರದ ಬಗ್ಗೆ ಇನ್ನಷ್ಟು ತಿಳಿಯಲು ಈ ಕೊಂಡಿಗೆ ಭೇಟಿ ನೀಡಿ.

ಮಣಿಪುರ ಚಕ್ರ

ಇದು ಚಕ್ರ ವ್ಯವಸ್ಥೆಯ ಮೂರನೇ ಚಕ್ರವಾಗಿದೆ. ಇದು ಇರುವುದು ಪಕ್ಕೆಲುಬು ಮತ್ತು ಹೊಕ್ಕುಳಿನ ಮಧ್ಯ ಭಾಗದಲ್ಲಿ. ಆತ್ಮಗೌರವ, ಆತ್ಮವಿಶ್ವಾಸ, ಮಾನಸಿಕ ಸಾಮರ್ಥ್ಯ, ಅಹಂ, ಮುಂತಾದವು ಇದರ ಸ್ವಭಾವ. ಇನ್ನು ಇದನ್ನು ಆಳುವ ದೇವತೆ ವಿಷ್ಣು ವೆಂದು ಪರಿಗಣಿಸಲಾಗುತ್ತದೆ. ಪಂಚಭೂತಗಳಲ್ಲಿ ಅಗ್ನಿಯನ್ನು ಈ ಚಕ್ರ ಪ್ರತಿನಿಧಿಸುತ್ತದೆ ಮತ್ತು ಇದರ ಬಣ್ಣ ಹಳದಿ.

ಸಕ್ರಿಯ ಮಣಿಪುರ ಚಕ್ರವು ವ್ಯಕ್ತಿಯನ್ನು ಆತ್ಮ ವಿಶ್ವಾಸಿಯನ್ನಾಗಿ ಮಾಡುತ್ತದೆ. ನಿಷ್ಕ್ರಿಯ ಅಥವಾ ಅಸಮರ್ಪಕ ಮಣಿಪುರ ಚಕ್ರವು ವ್ಯಕ್ತಿಯನ್ನು ಆತ್ಮ ವಿಶ್ವಾಸವಿಲ್ಲದ, ಆತ್ಮಗೌರವ ವಿಲ್ಲದವನಗಿಯೂ ಅಥವಾ ಖಿನ್ನತೆ, ನಿರುತ್ಸಾಹ ತರಬಹುದು. ಅಥವಾ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳಿಂದಾಗಿಯೂ ಬಳಲಿಸಬಹುದು. ಮಣಿಪುರ ಚಕ್ರದ ಬಗ್ಗೆ ಇನ್ನಷ್ಟು ತಿಳಿಯಲು ಈ ಕೊಂಡಿಗೆ ಭೇಟಿ ನೀಡಿ

ಅನಾಹತ ಚಕ್ರ

ಈ ನಾಲ್ಕನೇ ಚಕ್ರವು ಕೆಳಗಿನ ಮೂರು ಚಕ್ರ ಮತ್ತು ಮೇಲಿನ ಮೂರು ಚಕ್ರವನ್ನು ಸರಿದೂಗಿಸಲು ಇರುವ ಮಧ್ಯಂತರ ಚಕ್ರ. ಇದರ ಸ್ಥಳ ಎದೆಯ ಭಾಗದಲ್ಲಿ ಇರುತ್ತದೆ. ಇದು ಭಾವನೆಗಳಾದ ಪ್ರೀತಿ, ಸಹಾನುಭೂತಿ, ಉತ್ಸಾಹ, ನಂಬಿಕೆ ಮುಂತಾದವುಗಳನ್ನು ಉತ್ತೇಜಿಸುತ್ತದೆ.ಇದು ರುದ್ರ ದೇವರು ಆಳುವ ಚಕ್ರ. ಇದರ ಪಂಚ ಭೂತ ತತ್ವ ವಾಯು. ಇದರ ಬಣ್ಣ ಹಸಿರು.

ಸಮರ್ಪಕ ಅನಾಹತ ಚಕ್ರವು ವ್ಯಕ್ತಿಯನ್ನು ಹೆಚ್ಚು ಸಹಾನುಭೂತಿ, ಕಾಳಜಿ, ಪ್ರೀತಿಯುಳ್ಳವನಾಗಿಸುತ್ತದೆ. ಮುಚ್ಚಿ ಹೋಗಿರುವ ಅಥವಾ ನಿಷ್ಕ್ರಿಯ ಚಕ್ರವು ಭಯ, ಆತಂಕ, ಅಸೂಯೆ, ಅಪನಂಬಿಕೆ ಮುಂತಾದ ಭಾವನೆಗಳಿಗೆ ಕಾರಣವಾಗುತ್ತದೆ. ಅನಾಹತ ಚಕ್ರದ ಬಗ್ಗೆ ಇನ್ನಷ್ಟು ತಿಳಿಯಲು ಈ ಕೊಂಡಿಗೆ ಭೇಟಿ ನೀಡಿ.

ವಿಶುದ್ಧ ಚಕ್ರ

ಇದು ಐದನೇ ಚಕ್ರ ಮತ್ತು ಆಧ್ಯಾತ್ಮಿಕ ಉನ್ನತಿಗೆ ಕಾರಣವಾಗುವ ಮೇಲಿನ ಚಕ್ರಗಳಲ್ಲಿ ಈ ವಿಶುದ್ಧ ಚಕ್ರ ಮೊದಲನೆಯದು. ಜೀವಾತ್ಮನೆ ಈ ಚಕ್ರದ ಚಕ್ರವರ್ತಿ. ಇದು ಗಂಟಲಿನ ಕೆಳಭಾಗದಲ್ಲಿ ಇರುತ್ತದೆ. ಮೌಖಿಕ ಮತ್ತು ಲಿಖಿತ ಸಂವಹನ, ಅಭಿವ್ಯಕ್ತಿ, ಸ್ಪೂರ್ತಿ ಇವೆಲ್ಲ ವಿಶುದ್ಧ ಚಕ್ರದ ಸ್ವಭಾವಗಳು. ಇದು ಆಕಾಶ ತತ್ವವನ್ನು ಪ್ರತಿನಿಧಿಸುತ್ತದೆ. ಇದರ ಬಣ್ಣ ನೀಲಿ.

ವ್ಯಕ್ತಿಯ ವಿಶುದ್ಧ ಚಕ್ರವು ಸಕ್ರಿಯವಾಗಿದ್ದರೆ ಅವನ ಸ್ವಯಂ ಅಭಿವ್ಯಕ್ತಿ ಉತ್ತಮವಾಗಿರುತ್ತದೆ. ಬೇರೆಯವರೊಂದಿಗೆ ಮಾತ್ರವಲ್ಲ ತನ್ನೊಂದಿಗೆ ಸಹ. ವ್ಯಕ್ತಿಯ ಸಂವಹನ ಕೌಶಲ್ಯ ಅಷ್ಟು ಉತ್ತಮವಾಗಿಲ್ಲವೆಂದರೆ ವಿಶುದ್ಧ ಚಕ್ರದ ಜೊತೆ ಕೆಲಸ ಮಾಡಿ ಸಮಸ್ಯೆ ಪರಿಹರಿಸಬಹುದು. ವಿಶುದ್ಧ ಚಕ್ರದ ಬಗ್ಗೆ ಇನ್ನಷ್ಟು ತಿಳಿಯಲು ಈ ಕೊಂಡಿಗೆ ಭೇಟಿ ನೀಡಿ.

ಆಜ್ಞಾ ಚಕ್ರ

ಈ ಚಕ್ರವು ಆಧ್ಯಾತ್ಮಿಕ ಅರಿವಿಗೆ, ಪರಮಾತ್ಮನ ಸಾಕ್ಷಾತ್ಕಾರಕ್ಕೆ ದಾರಿ ತೋರುವ ಚಕ್ರ. ಎರಡು ಹುಬ್ಬುಗಳ ನಡುವೆ ಈ ಚಕ್ರವಿರುತ್ತದೆ. ವ್ಯಕ್ತಿಯ ಬುದ್ಧಿಶಕ್ತಿ, ಅಂತಃಪ್ರಜ್ಞೆ, ತನ್ನನ್ನು ತಾನು ಅರಿಯುವುದು ಮುಂತಾದ ಸಾಮರ್ಥ್ಯಗಳು ಈ ಚಕ್ರದ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಈ ಚಕ್ರದ ಬಣ್ಣ ಊದಾನೀಲಿ.

ಈ ಚಕ್ರವು ಆಧ್ಯಾತ್ಮಿಕತೆಯ ಅರಿವಿನ ಚಕ್ರವಾಗಿರುವುದರಿಂದ ಇದರ ಸಕ್ರಿಯತೆ ವ್ಯಕ್ತಿಯನ್ನು ಮರಣದ ಭಯದಿಂದ ದೂರವಾಗಿಸುತ್ತದೆ. ಮತ್ತು ಭೌತಿಕ, ಪ್ರಾಪಂಚಿಕ ಜೀವನದ ಮೋಹವನ್ನು ತ್ಯಜಿಸುತ್ತಾನೆ. ಅಸಮತೋಲನದ ಆಜ್ಞಾ ಚಕ್ರವು ವ್ಯಕ್ತಿಯನ್ನು ಅಹಂಕಾರಿಯಾಗಿ ಮಾಡಬಹುದು ಇಲ್ಲವೇ ದೈಹಿಕವಾಗಿ ತಲೆನೋವು, ಕಣ್ಣಿನ ಸಮಸ್ಯೆ ಮುಂತಾದವುಗಳನ್ನು ಒಡ್ಡಬಹುದು.

ಸಹಸ್ರಾರ ಚಕ್ರ

ಇದು ಸಾವಿರಾರು ದಳಗಳುಳ್ಳ ಕಮಲದಂತೆ ತೋರುವ ಈ ಚಕ್ರಕ್ಕೆ ಬ್ರಹ್ಮ ರಂದ್ರವೆಂದೂ ಕರೆಯುತ್ತಾರೆ. ಇದು ಆಧ್ಯಾತ್ಮಿಕ ಜಗತ್ತು ಮತ್ತು ಪ್ರಾಪಂಚಿಕ ಜಗತ್ತಿನ ನಡುವಿನ ಸೇತುವೆಯೆಂದೆ ಹೇಳಬಹುದು. ಇದು ಇರುವುದು ನಡು ನೆತ್ತಿಯ ಮೇಲೆ. ತ್ರಿಕಾಲ ಜ್ಞಾನ ಮುಂತಾದ ಅತಿಮಾನುಷ ಶಕ್ತಿಯನ್ನು ಪ್ರತಿನಿಧಿಸುತ್ತದೆ ಈ ಚಕ್ರ. ಮೋಕ್ಷಕ್ಕೂ ಸಹ ಇದೇ ಚಕ್ರವೇ ಕಾರಣ. ಈ ಚಕ್ರದ ಬಣ್ಣ ನೇರಳೆ.

ಸಹಸ್ರಾರ ಚಕ್ರವನ್ನು ಸಕ್ರಿಯಗೊಳಿಸುವುದೇ ಮನುಷ್ಯ ಜನ್ಮದ ಪರಮ ಧ್ಯೇಯ. ಪರಮೋಚ್ಚ ಜ್ಞಾನ ಈ ಚಕ್ರದ ಸಕ್ರಿಯಗೊಳಿಸುವಿಕೆಯಿಂದ ಸಾಧ್ಯವಾಗುತ್ತದೆ. ಏಕಾಗ್ರತೆ, ನೆನಪಿನ ಶಕ್ತಿ ಮುಂತಾದವುಗಳಿಗೆ ಬೇಕಾದ ಮೇಧಾ ಶಕ್ತಿಯು ಈ ಚಕ್ರದ ಸಮರ್ಪಕ ಕಾರ್ಯ ನಿರ್ವಹಿಸುವಿಕೆಯಿಂದ ಸಾಧಿಸಬಹುದು. ಈ ಚಕ್ರದ ಅಸಮತೋಲನ ವಿವಿಧ ದೈಹಿಕ, ಮಾನಸಿಕ ಸ್ಥರದಲ್ಲಿ ಪರಿಣಾಮ ಬೀರಬಹುದು. ತಲೆಶೂಲೆ, ನಿದ್ರಾಹೀನತೆ, ಸುಸ್ತು, ಖಿನ್ನತೆ, ಆಧ್ಯಾತ್ಮಿಕತೆಯ ಬಗೆಗೆ ಒಲವಿಲ್ಲದ್ದಿರುವುದು ಮುಂತಾದ ಲಕ್ಷಣಗಳು ಕಾಣಬಹುದು.

ಕೊನೆಯ ಮಾತು

ನಮ್ಮ ದೇಹದ ಶಕ್ತಿ ಕೇಂದ್ರಗಳಾಗಿರುವ ಈ ಚಕ್ರಗಳನ್ನು ನಿರ್ಲಕ್ಷ್ಯ ಮಾಡದೆ ಅವುಗಳನ್ನು ಗಮನಿಸಿ ಸಮಸ್ಯೆ ಯನ್ನು ಗುರುತಿಸಿ ಅವುಗಳ ಜೊತೆಗೆ ನಿಯಮಿತವಾಗಿ ಕೆಲಸ ಮಾಡಿ ನಮ್ಮ ಉನ್ನತ ಸಂಭಾವ್ಯತೆಯನ್ನು ಸಾಧಿಸಿಕೊಳ್ಳುವುದು ನಮ್ಮ ಕೈಲೇ ಇದೆ.Ll


Discover more from cosmiqgrace.com

Subscribe to get the latest posts sent to your email.

Leave a Reply

Author

cosmiqgrace@gmail.com

Related Posts