ತಂತ್ರಜ್ಞಾನದ ಬೆಳವಣಿಗೆಯಿಂದ ಇತ್ತೀಚಿನ ದಿನಗಳಲ್ಲಿ ಮನುಕುಲಕ್ಕೆ ಮಾಹಿತಿಯ ಕೊರತೆ ಇಲ್ಲ. ಆದರೆ ಯಾವ ಮಾಹಿತಿ ಬೇಕು ಯಾವುದು ಬೇಡ ಎಂದು ಅವರವರೇ ನಿರ್ಧರಿಸಬೇಕು. ಆದರೂ ಒಳ್ಳೆಯ ಬೆಳವಣಿಗೆ ಎಂದರೆ ಜನರು ಒಳ್ಳೊಳ್ಳೆಯ ವಿಚಾರಗಳಿಗೆ ಹೆಚ್ಚೆಚ್ಚು ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಇದು ಸ್ವಾಗತಾರ್ಹ. ಹಾಗೆಯೇ ರೇಕಿ ಚಿಕಿತ್ಸಾ ಪದ್ಧತಿಯೂ ಸಹ ಈಗಿನ ದಿನಗಳಲ್ಲಿ ಜಾಸ್ತಿ ಪ್ರಚಲಿತವಾಗುತ್ತಿದೆ. ಇದು ಕೆಲಸ ಮಾಡುವ ರೀತಿಯನ್ನು ನೋಡುವ ಮುನ್ನ ಅದರ ಇತಿಹಾಸವನ್ನು ಒಮ್ಮೆ ತಿಳಿದುಕೊಳ್ಳೋಣ.
ಇತಿಹಾಸ
ಹಾಗಾದರೆ ಈ ರೇಕಿ ಎಂದರೇನು? ಇದರ ಉಗಮ ಎಲ್ಲಿ ಹೇಗಾಯ್ತು ಮುಂತಾದ ಪ್ರಶ್ನೆಗಳಿಗೆ ಉತ್ತರ ನೋಡೋಣ. ರೇಕಿಯ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ. ೨೦ ನೇ ಶತಮಾನದ ಪ್ರಾರಂಭದ ವೇಳೆ ಜಪಾನಿನ ಡಾಕ್ಟರ್ ಮಿಕಾವೋ ಉಸುಯಿ ಎಂಬುವರು ಮೌಂಟ್ ಕುರಾಮ ಎಂಬ ಬೌದ್ಧರ ಪವಿತ್ರ ಸ್ಥಳದಲ್ಲಿ ೨೧ ದಿನಗಳ ಕಠಿಣ ಧ್ಯಾನದಲ್ಲಿ ತೊಡಗಿಸಿಕೊಂಡರು. ೨೧ ನೆಯ ದಿನದಲ್ಲಿ ಅವರಿಗೆ ರೇಕಿಯ ಆವರ್ತನ ಅವರಲ್ಲಿ ಪ್ರವೇಶಿಸಿ ಜ್ಞಾನೋದಯ ಉಂಟಾಯಿತು. ಅದೇನು ಎಂದು ನಿಖರವಾಗಿ ಗೊತ್ತಿಲ್ಲದೆ, ಅವರು ಹಿಂತಿರುಗುವಾಗ ಕಾಲಿಗೆ ಕಲ್ಲು ತಗುಲಿ ಗಾಯದಿಂದ ರಕ್ತ ಜಿನುಗಳು ಪ್ರಾರಂಭವಾಯಿತು. ರಕ್ತ ನಿಲ್ಲಿಸಲು ಕೈಲಿ ಒತ್ತಿ ಹಿಡಿದರು ಅಷ್ಟೇ, ಅದೇನಾಶ್ಚರ್ಯ! ರಕ್ತಸ್ರಾವ ನಿಂತೇ ಹೋಯಿತು. ಉಸೂಯಿ ಅವರು ಬೇಗ ಬೇಗ ಹಿಂತಿರುಗಿ ತಮ್ಮ ಈ ವಿದ್ಯೆಯನ್ನು ಜನರಿಗೆ ಗುಣಪಡಿಸಲು ಬಳಸಿದರು. ತಮ್ಮ ಜೀವಿತ ಕಾಲದಲ್ಲಿ ಜಪಾನಿನ ಉದ್ದಗಲಕ್ಕೂ ಸಂಚರಿಸಿ ಅನೇಕ ರೋಗಿಗಳಿಗೆ ಬೆಳಕಾದರು. ಜನರನ್ನು ಗುಣಪಡಿಸುವ ಜೊತೆಗೆ ಕೆಲವು ಜನರಿಗೆ ಈ ವಿದ್ಯೆ ಹೇಳಿಕೊಟ್ಟು ಅವರನ್ನು reiki master ಆಗಿ ಸಿದ್ದ ಮಾಡಿದರು.
ಮಾಸ್ಟರ್ ಉಸುಯಿ ಅವರ ಶಿಷ್ಯರುಗಳಲ್ಲಿ ಡಾಕ್ಟರ್ ಚುಜಿರೋ ಹಯಾಶಿ ಅವರು ಪ್ರಮುಖರು. ಅವರು ರೇಕಿಯನ್ನು ಒಂದು ವ್ಯವಸ್ಥಿತ ವಿದ್ಯೆಯಾಗಿ ರೂಪುಗೊಳಿಸಿದರು. ಸ್ವತಃ ವೈದ್ಯರಾದ ಇವರು ತಮ್ಮ ಮತ್ತು ತಮ್ಮ ಶಿಷ್ಯರ ಆಸ್ಪತ್ರೆಗಳಲ್ಲಿ ಔಪಚಾರಿಕ ಚಿಕಿತ್ಸೆ ಜೊತೆಗೆ ರೇಕಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಹಯಾಶಿ ಅವರ ಪ್ರಮುಖ ಶಿಷ್ಯೆಯಾದ Mrs. ಹಾವಾಯೋ ತಕಟಾ ಅವರು ರೋಗಿಯಾಗಿ ರೇಕಿ ಚಿಕಿತ್ಸೆ ಪಡೆದು ಅದರ ಪರಿಣಾಮದಿಂದ ಪ್ರಭಾವಿತರಾಗಿ ಸ್ವತಃ ರೇಕಿ ವಿದ್ಯಾರ್ಥಿಯಾದರು. ತದನಂತರ ರೇಕಿಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸಿದರು ಮತ್ತು ಚೈತನ್ಯ ವಿನಿಮಯದ ಅಗತ್ಯತೆಯನ್ನು ಒತ್ತಿ ಹೇಳಿದರು.
ಚೈತನ್ಯ ವಿನಿಮಯ(Energy exchange)
ಡಾ. ಮಿಕಾವೋ ಉಸೂಯಿ ಮತ್ತು ಹಯಾಶಿ ಅವರು ಜನಾಸೇವೆಗಾಗಿ ರೇಕಿಯನ್ನು ಬಳಸಿದರು. ಆದರೆ ಜನರು ಅದರ ಪ್ರಾಮುಖ್ಯತೆಯನ್ನು ಅರಿಯಲಿಲ್ಲ. ಕಾರಣ ರೇಕಿ ಚಿಕಿತ್ಸೆ ಅವರಿಗೆ ಸುಲಭವಾಗಿ ಯಾವುದೇ ಖರ್ಚಿಲ್ಲದೆ ಸಿಗುತ್ತಿತ್ತು. ಒಂದುವೇಳೆ ಇದೇ ಚಿಕಿತ್ಸೆಗೆ ತಮ್ಮ ಅಮೂಲ್ಯ ವಸ್ತು ಅಥವಾ ಕಷ್ಟಪಟ್ಟು ದುಡಿದ ಹಣ ಕೊಟ್ಟು ಪಡೆದುಕೊಳ್ಳುವುದಾಗಿದ್ದರೆ ರೇಕಿ ಎಂಬ ವಿದ್ಯೆಗೆ ಗೌರವ ಎಂಬುದನ್ನು ತಕಾಟ ಅವರು ಕಂಡುಕೊಂಡರು. ಅದರಂತೆ ಇವರು ತಮ್ಮ ವಿದ್ಯಾರ್ಥಿಗಳಿಂದ ಹೆಚ್ಚು ಗುರುದಕ್ಷಿಣೆ ಪಡೆಯುತ್ತಿದ್ದರು. ಮತ್ತು ಇವತ್ತಿನ ದಿನಗಳಲ್ಲಿ ರೇಕಿ ಇಷ್ಟು ಪ್ರಚಲಿತವಾಗುವುದಕ್ಕೆ ಇವರ ಕೊಡುಗೆ ಅಪಾರ.
ರೇಕಿ ಎಂದರೇನು?
ಇಷ್ಟೆಲ್ಲಾ ಇತಿಹಾಸವಿರುವ ರೇಕಿ, ಹೇಗೆ ಕೆಲಸ ಮಾಡುತ್ತದೆ? ಅದರ ಮೂಲವೇನು ಎಂದು ತಿಳಿದುಕೊಳ್ಳೋಣ. ಮೊದಲಿಗೆ, ರೇಕಿ ಯ ಅಕ್ಷರಶಃ ಅನುವಾದ – ರೇ (Rei) ಅಂದರೆ ವಿಶ್ವ, ಕಿ(ki) ಅಂದರೆ ಶಕ್ತಿ. ಹಾಗಾಗಿ ವಿಶ್ವ ಶಕ್ತಿಯೇ ರೇಕಿ. Reiki practitioner / ರೇಕಿ ಅಭ್ಯಸಿಸುವ ವ್ಯಕ್ತಿ ಈ ವಿಶ್ವ ಶಕ್ತಿಯ ವಾಹಿನಿಯಾಗಿ, ಶಕ್ತಿಯನ್ನು ಬೇಕಾದಲ್ಲಿ ಕಳುಹಿಸುತ್ತಾನೆ. ಒಂದು ನೆನಪಿಡುವ ಅಂಶವೆಂದರೆ, ಇದರಲ್ಲಿ ವ್ಯಕ್ತಿಯ ಶಕ್ತಿ ವಿನಿಯೋಗವಾಗುವುದಿಲ್ಲ, ಬದಲಿಗೆ, ಅವನೇ, ವಿಶ್ವ ಶಕ್ತಿಯ ಮಾಧ್ಯಮವಾಗಿ ತನ್ನ ಮೂಲಕ, ಶಕ್ತಿ ಪ್ರವಹಿಸಲು ಬಿಡುತ್ತಾನೆ. ಈ ಕ್ರಿಯೆ ವ್ಯಕ್ತಿ ಒಬ್ಬ ಗುರುಗಳಿಂದ ದೀಕ್ಷೆ ಪಡೆದಾಗ ಮಾತ್ರ ಸಾಧ್ಯವಾಗುತ್ತದೆ.
ರೇಕಿ ದೀಕ್ಷೆ ಎಂದರೇನು?
ರೇಕಿ ದೀಕ್ಷೆ ಅಥವಾ Reiki attunement ಎನ್ನುವುದು ರೇಕಿ ಗುರುಗಳು ರೇಕಿ ವಿದ್ಯಾರ್ಥಿಗೆ ರೇಕಿ ಬಳಸಲು ಅರ್ಹನಾಗಿಸುವ ಕ್ರಮ. ಇದರಲ್ಲಿ ವಿದ್ಯಾರ್ಥಿಯನ್ನು ವಿಶ್ವ ಶಕ್ತಿ ಯನ್ನು ಹಿಡಿಯಲು ಬೇಕಾದ frequency (ಆವರ್ತನ) ಗೆ ಕರೆದೊಯ್ಯುತ್ತಾರೆ. ಅಂದರೆ ವಿದ್ಯಾರ್ಥಿಯು ಈ ವಿಶ್ವ ಶಕ್ತಿಯ ವಾಹಿನಿಯಾಗಲು ಸಮರ್ಥನಾಗುತ್ತನೆ. ಒಂದು ಉತ್ತಮ ಉದಾಹರಣೆ ಎಂದರೆ ಒಂದು ರೇಡಿಯೋ ಎಫ್.ಎಂ ನ ವಾಹಿನಿಯಾಗಲು ಸಮರ್ಥವಿದ್ದರೂ, ಅದರ ಫ್ರಿಕ್ವೆನ್ಸಿಯನ್ನು ರೇಡಿಯೋ ಸ್ಟೇಷನ್ ನ ಫ್ರೀಕ್ವಿನ್ಸಿಗೆ ಸರಿ ಹೊಂದಿಸಬೇಕು. ಹಾಗಿದ್ದರೆ ಮಾತ್ರ ರೇಡಿಯೋದಲ್ಲಿ ಎಫ್.ಎಂ. ಕೇಳಬಹುದು. ಅದೇ ರೀತಿಯಲ್ಲಿ, ನಮಗೆ ಈ ದೇಹ ಒಂದು ಸಾಧನ ಅಷ್ಟೇ. ಅದನ್ನ ನಮಗೆ ಬೇಕಾದ ರೀತಿಯಲ್ಲಿ ಫ್ರಿಕ್ವೆನ್ಸಿ ಸರಿ ಹೊಂದಿಸಿ ಆ ವಿಶ್ವ ಶಕ್ತಿಯ ವಾಹಿನಿಯಾಗಿ ಮಾರ್ಪಡಿಸುವ ಕಾರ್ಯಕ್ರಮವೇ Reiki Attunement ceremony.
ಯಾರೆಲ್ಲ ರೇಕಿ ದೀಕ್ಷೆ ಪಡೆದು ಕೊಳ್ಳಬಹುದು?
೧೨ ವರುಷ ಮೇಲ್ಪಟ್ಟ ಯಾರಾದರೂ ಸಹ ರೇಕಿ ದೀಕ್ಷೆ ಪಡೆದುಕೊಂಡು ಅಭ್ಯಾಸ ಮಾಡಬಹುದು. ಒಂದು ಸಾರಿ ದೀಕ್ಷೆ ಪಡೆದ ಮೇಲೆ ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಅವರು ಉತ್ತಮ ಹೀಲರ್ ಆಗುವಲ್ಲಿ ಯಾವುದೇ ಸಂಶಯವಿಲ್ಲ.
ರೇಕಿ ಅಭ್ಯಾಸಿಯ ಜೀವನ ಕ್ರಮ
ರೇಕಿ ದೀಕ್ಷೆ ಪಡೆದ ನಂತರ ಕೆಲವೊಂದು ಪೂರಕ ಜೀವನ ಕ್ರಮ ನಮ್ಮದಾಗಿಸಿಕೊಳ್ಳಬೇಕು. ನನ್ನ ಪ್ರಕಾರ ರೇಕಿ ಅಂದರೆ ಅದೊಂದು ಜೀವನ ಕ್ರಮ. ಡಾ. ಮೀಕಾವೋ ಉಸೂಯಿ ಹೇಳಿದ ೫ ಸೂತ್ರ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ೫ ರೇಕಿ ಸೂತ್ರಗಳು ಇಂತಿವೆ:
- ಈ ಒಂದು ದಿನ ನಾನು ಕೋಪಗೊಳ್ಳುವುದಿಲ್ಲ.
- ಈ ಒಂದು ದಿನ ನಾನು ಚಿಂತಿಸುವುದಿಲ್ಲ.
- ಈ ಒಂದು ದಿನ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
- ಈ ಒಂದು ದಿನ ನನ್ನ ಸುತ್ತ ಇರುವ ಜೀವಿಗಳಿಗೆ ಸಹಾನುಭೂತಿ ತೋರುತ್ತೇನೆ.
- ಈ ಒಂದು ದಿನ ನಾನು ಕೃತಜ್ಞನಾಗಿ ಇರುತ್ತೇನೆ.
ಈ ಐದು ಸೂತ್ರಗಳು ನಮ್ಮನ್ನು ಉತ್ತಮ ಕಂಪನದಲ್ಲಿ ಇಡಲು ಸಾಧ್ಯವಾಗಿಸುತ್ತವೆ. ಉತ್ತಮ ಕಂಪನ ನಮ್ಮ ಆರೋಗ್ಯಕ್ಕೆ ಯಾವಾಗಲೂ ಪೂರಕವಾಗಿರುತ್ತವೆ.
ರೇಕಿ ಉಪಯೋಗಗಳು:
ರೇಕಿ ಎಂದರೇನು, ರೇಕಿ ವೈದ್ಯರಾಗುವುದು ಹೇಗೆ ಎಂದು ತಿಳಿದುಕೊಂಡಾಯಿತು. ಇನ್ನು ರೇಕಿಯ ಉಪಯೋಗಗಳ ಬಗೆಗೆ ಸ್ವಲ್ಪ ತಿಳಿಯೋಣ. ಒಂದುವೇಳೆ ರೇಕಿ ನಿಮ್ಮ ಜೀವನ ಕ್ರಮವಾಯಿತು ಎಂದರೆ ರೇಕಿಯನ್ನೆ ನೀವು ಉಸಿರಾಡುವಿರಿ. ಎಲ್ಲಿ ಹೇಗೆ ಬೇಕಾದರೂ ರೇಕಿ ಯನ್ನು ಕಳುಹಿಸಬಹುದು. ಕೆಲವೊಂದು ಉಪಯೋಗಗಳನ್ನು ನಾನು ಈ ಕೆಳಗೆ ಬರೆದಿರುತ್ತೇನೆ:
– ದೈಹಿಕ ಕಾಯಿಲೆ ಗಳನ್ನು ಗುಣಪಡಿಸುವುದು:
ಕೆಲವೊಂದು ದೈಹಿಕ ಕಾಯಿಲೆಗಳು ರೇಕಿ ಸಹಾಯದಿಂದ ಅದ್ಭುತವಾಗಿ ಪರಿಣಾಮಕಾರಿಯಾಗಿ ಗುಣವಾಗುತ್ತವೆ. ಒಂದು ನೆನಪಿನಲ್ಲಿ ಇಡಬೇಕಾದ ಅಂಶವೆಂದರೆ ರೇಕಿ ಇಲ್ಲಿ ಒಂದು ಪೂರಕ ಚಿಕಿತ್ಸೆ, ಅಂದರೆ ನಿಮ್ಮ ವೈದ್ಯರು ಹೇಳಿರುವ ಚಿಕಿತ್ಸೆಯ ಜೊತೆಗೆ ಇದು ಸೇರಿದರೆ ಉತ್ತಮ ಫಲತಾಂಶ ನಿರೀಕ್ಷಿಸಬಹುದು. ಸಣ್ಣ ಪುಟ್ಟ ಅನಾರೋಗ್ಯವೂ ಸಹ ರೇಕಿಯ ಪ್ರವಹನೆಯಿಂದ ಪರಿಹಾರವಾಗಬಹುದು. ಜೊತೆಗೆ ಮಂಡಿನೋವು, ಮೈಗ್ರೇನ್ ಮುಂತಾದ ಕಾಯಿಲೆಯಿಂದಿಗೆ ಉತ್ತಮ ಫಲಿತಾಂಶ ನೋಡಬಹುದು. ಕ್ಯಾನ್ಸರ್ ನಂತಹ ಮಹಾಮಾರಿಯನ್ನು ಸಹ ರೇಕಿ ಮತ್ತು ಸಾಂಪ್ರದಾಯಿಕ ಚಿಕಿತ್ಸೆಯಿಂದ ಗುಣಪಡಿಸಬಹುದು.
– ಮಾನಸಿಕ ಸಂತುಲನ:
ರೇಕಿ ಚಿಕಿತ್ಸೆಯಿಂದ ಮಾನಸಿಕ ಸಂತುಲನ ಸಾಧ್ಯವಿದೆ. ರೇಕಿ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯು ಮಾನಸಿಕವಾಗಿ ಉತ್ತಮವಾದ ಕಂಪನದಲ್ಲಿ ಇರುವಂತಾಗುತ್ತದೆ. ಆಗ ಅಂದುಕೊಂಡಿದ್ದು ಸಾಧಿಸುವುದು ಬಹಳ ಸುಲಭವಾಗುತ್ತದೆ. ಮತ್ತು ಜೀವನವನ್ನು ಉಲ್ಲಾಸಭರಿತವಾಗಿಸುತ್ತದೆ.
ಬಹಳ ಮುಖ್ಯವಾಗಿ ರೇಕಿ ಪ್ರವಹಿಸುವುದರಿಂದ ರೇಕಿ ತೆಗೆದುಕೊಳ್ಳುವವನು ಅನಂದಭರಿತನಾಗುತ್ತಾನೆ. ನಮ್ಮ ಸ್ಥಿತಿಗತಿ ಹೇಗೆ ಇದ್ದರೂ ಆನಂದ, ಸಂತೋಷ ಮುಂತಾದ ಭಾವನೆಗಳು ನಮ್ಮ ಯಶಸ್ಸಿಗೆ ಕಾರಣವಾಗುತ್ತವೆ.
ರೇಕಿ ಚಿಕಿತ್ಸೆಯು ನರಸಂಬಂಧಿ ಕಾಯಿಲೆಗಳು, ಆಟಿಸಂ, ಎ ಡಿ ಎಚ್ ಡಿ ಮುಂತಾದ ನರ ವೈವಿಧ್ಯತೆಯ ಸ್ಥಿತಿ ಗಳನ್ನೂ ಸಹ ಸುಲಭಗೊಳಿಸುತ್ತದೆ.
– ಭೂತ ಮತ್ತು ಭವಿಷ್ಯತ್ ಕಾಲಕ್ಕೆ ರೇಕಿ ಕಳುಹಿಸುವುದು:
ರೇಕಿಯನ್ನು ಕಾಲಗಳ ಅವಲಂಬನೆ ಇಲ್ಲದೇ ಕಳುಹಿಸುವುದು ಸಾಧ್ಯವಿದೆ. ಇದರಿಂದ ನಿಮ್ಮ ಆಹಿತಕಾರಿ ಭೂತಕಾಲವನ್ನು ಗುಣಪಡಿಸಬಹುದು. ಇಲ್ಲವೇ ಮುಂದೆ ನಡೆಯಬೇಕಾದ ಘಟನೆಗೆ ಕಳುಹಿಸಬಹುದು. ಇವೆರಡೂ ಸಹ ಸ್ವಲ್ಪ ಆಳವಾದ ವಿಷಯಗಳು ಮತ್ತು ಕೆಲವೊಂದು ಅಂಶಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳುವುದಿರುತ್ತದೆ. ಆದರೆ ಇದನ್ನು ಪ್ರಯತ್ನಿಸಿ ನೋಡುವುದರಲ್ಲಿ ಯಾವುದೇ ಹಾನಿಯಿಲ್ಲ.
ಇವಿಷ್ಟಲ್ಲದೆ ರೇಕಿ ಯಿಂದ ಇನ್ನೂ ಹತ್ತು ಹಲವು ಉಪಯೋಗಗಳಿವೆ. ನಿಮ್ಮ ಯಾವುದೇ ಸಮಸ್ಯೆಗೆ ಉತ್ತರ ರೇಕಿಯಲ್ಲಿದೆ.
ಯಾರೆಲ್ಲ ರೇಕಿ ಚಿಕಿತ್ಸೆ ಪಡೆದು ಕೊಳ್ಳಬಹುದು?
ಯಾರಾದರೂ ತೆಗೆದುಕೊಳ್ಳಬಹುದು. ಎಲ್ಲಾರೂ ತೆಗೆದು ಕೊಳ್ಳಬಹುದು. ನಂಬಿಕೆ ಇದ್ದವರೂ ತೆಗೆದುಕೊಳ್ಳಬಹುದು, ನಂಬಿಕೆ ಇಲ್ಲದವರು ಸಹ ತೆಗೆದು ಕೊಳ್ಳಬಹುದು. ರೇಕಿ ಅದರ ಕೆಲಸ ಮಾಡಿಯೇ ಮಾಡುತ್ತದೆ.
ಪ್ರಾಣಿ ಪಕ್ಷಿ ಗಳ ಮೇಲೆ ರೇಕಿ ಪ್ರಯೋಗಿಸಬಹುದೇ?
ಹೌದು. ಮತ್ತು ಪ್ರಾಣಿ ಪಕ್ಷಿ ಗಳು ಇನ್ನು ವೇಗವಾಗಿ ರೇಕಿ ಗೆ ಸ್ಪಂದಿಸುತ್ತವೆ. ಏಕೆಂದರೆ ಅವು ನಿಸರ್ಗದ ನೀತಿ ನಿಯಮಗಳಿಗೆ ಆಧುನಿಕ ಮಾನವರಿಗಿಂತ ಜಾಸ್ತಿ ಹೊಂದಿಕೊಂಡಿವೆ. ಹಾಗಾಗಿ ಅವು ಸ್ಪಂದಿಸುವ ವೇಗವೂ ಹೆಚ್ಚು. ಅದಲ್ಲದೆ ನೀವು ನಿಮ್ಮ ಸಾಕುಪ್ರಾಣಿಗಳ ಮೇಲೆ ರೇಕಿ ಪ್ರಯೋಗಿಸಿದರೆ ಅವು ಅದನ್ನು ಇಷ್ಟಪಡುವ ಸಾಧ್ಯತೆಯೂ ಹೆಚ್ಚು. ಸಾಕುಪ್ರಾಣಿಗಳ ಲ್ಲದೇ ಹೋದರೆ ನಿಮ್ಮ ಸುರಕ್ಷತೆಗಾಗಿ ದೂರದಿಂದಲೇ ಕಳುಹಿಸುವುದು ಉತ್ತಮ.
ರೇಕಿ ಮತ್ತು ನವಜಾತ ಶಿಶುಗಳು
ನವಜಾತ ಶಿಶುಗಳು ಮತ್ತು ಮಕ್ಕಳು ಮನಸ್ಸಿನ ಕಲ್ಮಶ, ಅನವಶ್ಯಕ ಹೆದರಿಕೆ, ಆತಂಕ ಮುಂತಾದವುಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಅಂತವರ ಮೇಲೆ ರೇಕಿ ಕೆಲಸಾಡುವುದು ಸಹ ಬಹಳಷ್ಟು ಸುಲಭ. ಮಕ್ಕಳು ಹೀಗಾಗಿ ಬಹಳ ವೇಗವಾಗಿ ಸ್ಪಂದಿಸುತ್ತಾರೆ. ಅವಧಿಪೂರ್ವ ಜನಿಸಿರುವ ನವಜಾತ ಶಿಶುಗಳಿಗೆ ರೇಕಿ ನೀಡುವುದು ಅದರ ಸಮಗ್ರ ಬೆಳವಣಿಗೆಗೆ ಒಂದು ಉತ್ತಮ ಉಪಾಯವಾಗಿದೆ. ಇಂತಹ ಸಮಯದಲ್ಲಿ ತಾಯಿಯೇ ರೇಕಿ ಕಳುಹಿಸಿದರೆ ಮಗುವಿಗೆ ಮಾತೃ ವಾತ್ಸಲ್ಯ ಮತ್ತು ವಿಶ್ವ ವಾತ್ಸಲ್ಯ ಎರಡೂ ಸಹ ಒಂದೇ ಸಮಯಕ್ಕೆ ಒಟ್ಟಿಗೇ ಸಿಕ್ಕಂತಾಗುತ್ತದೆ.
ಎಲ್ಲರ ಮೇಲೂ ರೇಕಿ ಕೆಲಸ ಮಾಡುತ್ತದೆಯೇ?
ಹೌದು. ರೇಕಿ ಗೆ ಎಲ್ಲಾ ಜೀವಜಂತುಗಳು ಸರಿ ಸಮಾನರು. ರೇಕಿ ಅದರ ಆಶೀರ್ವಾದವನ್ನು ನಮ್ಮೆಲ್ಲರ ಮೇಲೆ ಸುರಿಸಲು ತಯಾರಾಗಿಯೇ ಇದೆ. ಆದರೆ ಅದನ್ನು ಪಡೆದುಕೊಳ್ಳುವ ಇಚ್ಛಾ ಶಕ್ತಿ, ಸಾಮರ್ಥ್ಯ ನಮ್ಮಲ್ಲಿರಬೇಕಷ್ಟೇ. ಉದಾಹರಣೆಗೆ ನಿಮ್ಮ ಆರೋಗ್ಯಕ್ಕಾಗಿ ರೇಕಿ ಪಡೆದುಕೊಳ್ಳುತ್ತಿ ದ್ದೀರಿ ಎಂದಾದರೆ ಆ ಪವಿತ್ರ ಶಕ್ತಿ ನಿಮ್ಮಲ್ಲಿ ಪ್ರವಹಿಸಲು ನಿಮ್ಮ ದೇಹ ಮನಸ್ಸು ಎರಡೂ ಒಂದು ಮಟ್ಟಿಗೆ ಶುದ್ಧವಾಗಿರಬೇಕು, ಅಂದರೆ ಬೇಡವಾದ ಚಿಂತನೆಗಳು, ಖಿನ್ನತೆ, ಆತಂಕ, ಅಸೂಯೆ ಮುಂತಾದ ಋಣಾತ್ಮಕ ಭಾವನೆಗಳು ಸ್ವಲ್ಪಮಟ್ಟಿಗಾದರೂ ದೂರವಾಗಬೇಕು. ಅಂತಹ ಪ್ರಕರಣಗಳಲ್ಲಿ ರೇಕಿ ಕೆಲಸ ಮಾಡಲು ಸ್ವಲ್ಪ ಹೆಚ್ಚಿಗೆ ಸಮಯ ತೆಗೆದು ಕೊಳ್ಳಬಹುದು. ಕರ್ಮದ ಅನುಸಾರವೂ ರೇಕಿ ಕೆಲಸ ಮಾಡುತ್ತದೆ. ಹಾಗಾಗಿ ರೇಕಿ ಕಳುಹಿಸಿದ ಕೂಡಲೇ ನಾವು ಅಂದುಕೊಂಡಂತೆ ಎಲ್ಲ ಪ್ರಕರಣಗಳಲ್ಲೂ ಕೆಲಸ ಆಗುವುದಿಲ್ಲ. ವಿಶ್ವದ ಯೋಜನೆ ನಮಗೋಸ್ಕರ ನಾವು ಅಂದುಕೊಂಡಿರುವುದಕ್ಕಿಂತ ಬೇರೆಯೇ ಇರುತ್ತದೆ. ಆದರೆ ಅದೇನೆ ಇದ್ದರೂ ರೇಕಿ ಎಂದಿಗೂ ಸಹ ರೇಕಿ ಶಕ್ತಿ ಪಡೆದು ಕೊಳ್ಳುವವರ ಒಳಿತನ್ನೇ ಮಾಡುತ್ತದೆ.
ರೇಕಿಯ ಅನಾನುಕೂಲ
ಇಲ್ಲ. ರೇಕಿಯಂದ ಯಾವುದೇ ಅನಾನುಕೂಲ ಆಗುವ ಸಾಧ್ಯತೆಗಳಿಲ್ಲ. ಅಲ್ಲದೆ ರೇಕಿಯಿಂದ ಯಾರೂ ಯಾರಿಗೂ ಹಾನಿ ಮಾಡಲೂ ಸಾಧ್ಯವಿಲ್ಲ. ಏಕೆಂದರೆ, ಮೇಲೆ ಹೇಳಿದ ಹಾಗೆ ರೇಕಿ ಅಂದರೆ ಅದು ವಿಶ್ವ ಶಕ್ತಿ. ವಿಶ್ವಕ್ಕೆ ನೀವೂ ಮತ್ತು ಬೇರೆಯವರೂ ಸರಿ ಸಮಾನರು. ಎಲ್ಲ ಜೀವ ಜಂತುಗಳೂ ಈ ವಿಶ್ವದ ಮಕ್ಕಳೇ. ಹಾಗಾಗಿ ಆ ದೈವಿಕ ಶಕ್ತಿ ಯಾರಿಗೂ ಎಂದಿಗೂ ಹಾನಿ ಮಾಡಲು ಸಾಧ್ಯವಿಲ್ಲ.
ಮುಕ್ತಾಯ
ಈ ಮೊದಲೇ ನಾನು ಹೇಳಿದಂತೆ ರೇಕಿ ಚಿಕಿತ್ಸೆ ಮತ್ತು ದೀಕ್ಷೆ ಪಡೆದುಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಇಂತಹ ಸುಲಭದ ಮತ್ತು ಶಕ್ತಿಯುತ ಚಿಕಿತ್ಸಾ ಪದ್ಧತಿಯನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಳುವಂತಹ ಕಷ್ಟದ ಕೆಲಸವೇನಲ್ಲ. ಅದರ ಬದಲಿಗೆ ನಿಮಗೆ ಸಿಗುವ ಉಪಯೋಗವೂ ಅಗಾಧ. ಇದನ್ನರಿತು ಈ ಶಕ್ತಿಯನ್ನು ನಮ್ಮ ಸುತ್ತ ಮುತ್ತಲಿನ ಜೀವಿಗಳ ಏಳಿಗೆಗೆ ಉಪಯೋಗಿಸಿ ಆ ದೈವ ಕೃಪೆಗೆ ಪಾತ್ರರಾಗೋಣ.
Discover more from cosmiqgrace.com
Subscribe to get the latest posts sent to your email.
2 comments