pexels-photo-8378729-8378729.jpg

ವಿಶೇಷ ಸೂಚನೆ: ಈ ಲೇಖನ ವೈದ್ಯಕೀಯ ತಪಾಸಣೆಯ ಪರ್ಯಾಯವಲ್ಲ, ಬದಲಿಗೆ ಶೈಕ್ಷಣಿಕ ಉದ್ದೇಶ ಮಾತ್ರವಾಗಿದೆ. ನಿಮ್ಮ ಯಾವುದೇ ಸಮಸ್ಯೆಗೆ ಸಂಬಂಧಿತ ವೈದ್ಯರ ಬಳಿ ಸಮಾಲೋಚನೆ ನಡೆಸುವುದು ಉತ್ತಮ ಎಂದು ನಂಬುತ್ತೇನೆ.

ಎ. ಡಿ. ಎಚ್. ಡಿ. /ಎ. ಡಿ. ಡಿ (ADHD/ADD)

ನೀವು ಎಂದಾದರೂ ನಿಮ್ಮ ವಾಹನದ ಕೀ ಮರೆತು ಇಡೀ ಮನೆ ಹುಡುಕಿದ್ದೀರಾ? ಯಾವುದೋ ಮುಖ್ಯ ಸಂಭಾಷಣೆಯ ಮಧ್ಯದಲ್ಲಿ ಕಳೆದು ಹೋಗಿ ಆಮೇಲೆ ಅವರೇನೆಂದರು ಎಂದು ನೆನಪು ಮಾಡಿಕೊಳ್ಳಲು ಹೆಣಗಾಡಿ ಸೋತಿದ್ದೀರಾ? ಮನೆಯಿಂದ ಹೊರ ಬಂದಮೇಲೆ ಮನೆ ಕೀಲಿ ಹಾಕಿದ್ದೀನೋ ಇಲ್ಲವೋ? ಗ್ಯಾಸ್ ಅರಿಸಿದ್ದೀನೋ ಇಲ್ಲವೋ? ವಿದ್ಯುದ್ದೀಪ ಆರಿಸಿದ್ದೇನೆಯೆ ಮುಂತಾದ ಅನುಮಾನ ಕಾಡುತ್ತಿದೆಯೇ? ಹಾಗಿದ್ದರೆ ಮುಂದೆ ಓದಿ. ನಿಮಗೆ ಎ.ಡಿ.ಏಚ್.ಡಿ ಕಾಯಿಲೆ ಇದೆಯೇ ಎಂದು ತಿಳಿದುಕೊಳ್ಳಿ.

g05ef930a33b028d3e377a331562a1fe55e89ddeb40e7f7bb3725640ab15ee2a0cc604d28724f16969b25975fcc3e51827de05deed162b4a67c6d7b4e006d628a_1280-7633351.jpg

ಮೇಲೆ ಹೇಳಿದ ಎಲ್ಲ ಸಮಸ್ಯೆಗಳೂ ಆರೋಗ್ಯಯುತ ವ್ಯಕ್ತಿಯ ಜೀವನದಲ್ಲಿ ಒಂದಲ್ಲ ಒಂದು ಬಾರಿ ಎದುರಾಗಿಯೆ ಆಗಿರುತ್ತದೆ. ಅದು ಕಾಳಜಿಯ ಕಾರಣ ಅಲ್ಲ. ಆದರೆ ಈ ತರಹದ ಸಮಸ್ಯೆಗಳು ಸತತ ಅರು ತಿಂಗಳು ಅಥವಾ ಹೆಚ್ಚು ಇದ್ದರೆ ಇದು ನಿಮ್ಮ ಮೇಲೆ ನೀವು ಕೆಲಸ ಮಾಡುವ ಸಮಯ. ಅದಕ್ಕೂ ಮೊದಲು ಈ ADHD ಎಂದರೇನು? ಅದನ್ನು ಪತ್ತೆ ಹಚ್ಚುವುದು ಹೇಗೆ ಎಂದು ನೋಡೋಣ.

ADHD ಎಂದರೇನು?

ADHD (Attention Deficit Hyperactivity Disorder) ಅಥವಾ ADD ( Attention Deficit Disorder) ಇದು ಒಂದು ನರವೈವಿಧ್ಯತೆಯಾಗಿದ್ದು, (neuro divergent) ಇದರಲ್ಲಿ ಮೆದುಳು ಕಾರ್ಯ ನಿರ್ವಹಿಸುವ ವಿಧಾನ ವಿಭಿನ್ನವಾಗಿರುತ್ತದೆ. ಆಟಿಸಂ ಕೂಡ ಒಂದು ನರ ವೈವಿಧ್ಯತೆಯಾಗಿದ್ದು, ADHD ಕಂಡು ಬರುವ ಮಕ್ಕಳಲ್ಲಿ ಆಟಿಸಂ ಕೂಡ ಕಂಡುಬರುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ರೋಗನಿರ್ಣಯ ಮಾಡಿ ಚಿಕಿತ್ಸೆ ಕೂಡ ಲಭ್ಯವಿದೆ. ಇನ್ನು ಎ. ಡಿ. ಎಚ್. ಡಿ. ಮಾತ್ರವೇ ಹೊಂದಿರುವ ಮಕ್ಕಳಲ್ಲಿ ಇದನ್ನು ಪಾಲಕರು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಪ್ರಕ್ರಿಯೆ ತೀರ ವಿರಳ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಪಾಲಕರು ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ. 

ADHD ಯ ತೀವ್ರ ಪ್ರಕರಣಗಳು ಬಾಲ್ಯದಲ್ಲೇ ಕಂಡು ಬರುತ್ತದೆ. ತರಗತಿಯಲ್ಲಿ ಪಾಠ ಕೇಳದಿರುವುದು, ಪಾಲಕರ, ಸಹಪಾಠಿಗಳ ಮಾತು ಕೇಳದಿರುವುದು, ತಮ್ಮ ಮನಸಿಗೆ ಬಂದಂತೆ ನಡೆದುಕೊಳ್ಳುವುದು, ಇತ್ಯಾದಿ. ಇಂತಹ ನಡುವಳಿಕೆಗಳು ಸಾಮಾನ್ಯವಾಗಿ ತುಂಟತನವೆಂದು ಕರೆದು ಸುಮ್ಮನಾಗಿ ಬಿಡುತ್ತಾರೆ. 

ಮಕ್ಕಳು ಬೆಳೆದು ದೊಡ್ಡವರಾದಂತೆ ಈ ತುಂಟತನಗಳು ಕಡಿಮೆಯಾದರೂ ಒಂದು ಕಡೆ ಗಮನ ಕೇಂದ್ರೀಕರಿಸುವುದು ಕಷ್ಟವಾಗಿಯೇ ಉಳಿಯುತ್ತದೆ. ದುರದೃಷ್ಟವಶಾತ್  ತಮಗೆ ಆಸಕ್ತಿಯಿಲ್ಲದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭ ಬಂದರೆ ಆಗ ವೃತ್ತಿಜೀವನ ಏಳಿಗೆ ಕಾಣದೆ ಹತಾಶರಾಗುವ ಸಾಧ್ಯತೆ ಹೆಚ್ಚು. ಇಂತಹ ಪತ್ತೆ ಹಚ್ಚದ ಪ್ರಕರಣಗಳಲ್ಲಿ ಅಂತಹ ಮಕ್ಕಳು ಬೆಳೆದು ದೊಡ್ಡವರಾಗಿ ತಾವೇಕೆ ಹೀಗೆ ಎಂದು ಅರಿಯದೆ ಗೊಂದಲಕ್ಕೀಡಾಗಿ ತಮ್ಮ ಬಗೆಗೆ ಒಂದು ಅಪರಾಧಿ ಮನೋಭಾವನೆ ಬೆಳೆಸಿಕೊಳ್ಳುವ ಸಾಧ್ಯತೆಯೂ ಹೆಚ್ಚು.

ADHD ಅಥವಾ ಮರೆವಿನ ಕಾಯಿಲೆ ಹೊಂದಿದವರ ಮೆದುಳನ್ನು ಸ್ಕ್ಯಾನ್ ಮಾಡಿದ ಚಿತ್ರವನ್ನು ಪರೀಕ್ಷಿಸಿದಾಗ ಕಂಡುಬಂದುದೇನೆಂದರೆ ADHD ಮೆದುಳಿನ ಮುಂಭಾಗದ ಹಾಲೆ (frontal lobe) ಮತ್ತು ಸೆರೆಬೆಲಂ ಸಾಮಾನ್ಯ ಮೆದುಳಿಗಿಂತ ಚಿಕ್ಕದಾಗಿರುವುದು. ಮೆದುಳಿನ ಮುಂಭಾಗದ ಹಾಲೆಯು ನಮ್ಮ ಜ್ಞಾಪಕ, ಭಾವನೆ, ಹಠಾತ್ ಪ್ರವೃತ್ತಿ, ಸಾಮಾಜಿಕ ನಡುವಳಿಕೆ ಮುಂತಾದವುಗಳನ್ನು ನಿಯಂತ್ರಿಸುತ್ತದೆ. ಸೆರೆಬೆಲಂ ದೇಹದ ಸಮನ್ವಯತೆ ಕಾಪಾಡುತ್ತದೆ. ಮಕ್ಕಳು ವಯಸ್ಕರಾಗುವ ವೇಳೆಗೆ ಈ ಸೆರೆಬೆಲಂ ಸಾಮಾನ್ಯ ಗಾತ್ರಕ್ಕೆ ಬಂದು ಮುಟ್ಟುತ್ತದೆ. ಹಾಗಾಗಿ ಚಂಚಲ ಪ್ರವೃತ್ತಿ, ಸಮನ್ವಯತೆ ಒಂದು ಮಟ್ಟಕ್ಕೆ ನಿಯಂತ್ರಣಕ್ಕೆ ಬರುತ್ತದೆ. ಆದರೆ ಮುಂಭಾಗದ ಹಾಲೆಯ ಹಾಗೆಯೇ ಉಳಿಯುವುದರಿಂದ ಗಮನ ಕೇಂದ್ರೀಕರಿಸುವುದು ಕಷ್ಟವಾಗಿಯೆ ಉಳಿಯುತ್ತದೆ.

ADHD ವಿಧಗಳು ಮತ್ತು ಅದರ ಲಕ್ಷಣಗಳು :

ತಜ್ಞ ರ ಪ್ರಕಾರ ಈ ADHD/ADD ಯಲ್ಲಿ ಹಲವಾರು ಪ್ರಕಾರಗಳಿವೆ ಮತ್ತು ರೋಗಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬೇರೆಯಾಗಿರುತ್ತದೆ. ಇದರಲ್ಲಿ ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. 

೧. ಹಠಾತ್ ಪ್ರವೃತ್ತಿ, ತೀವ್ರ ಚಟುವಟಿಕೆ:
Image by Freepik

ಈ ಪ್ರಕಾರದಲ್ಲಿ ವ್ಯಕ್ತಿಯು ಹಠಾತ್ ಪ್ರವೃತ್ತಿಯನ್ನಷ್ಟೆ ಹೊಂದಿರುತ್ತಾನೆ. ತನ್ನ ಭಾವನೆಯನ್ನು ಹತ್ತಿಕ್ಕಲಾಗದೆ ತಕ್ಷಣವೇ ಪ್ರತಿಕ್ರಿಯಿಸುತ್ತಾನೆ. ಆದರೆ ಗಮನ ಕೇಂದ್ರೀಕರಿಸುವುದು ಅಷ್ಟು ಸಮಸ್ಯೆ ಎನಿಸುವುದಿಲ್ಲ. ತೀವ್ರ ಚಟುವಟಿಕೆಯೂ, ಚಂಚಲತೆಯೂ ಇಲ್ಲದಿರಬಹುದು. 

ಲಕ್ಷಣಗಳು :
  •  ಎದುರಿನವರು ಮಾತು ಮುಗಿಸುವ ಮೊದಲೇ ಅಡ್ಡಿಪಡಿಸಿ ತಮ್ಮ ಮಾತನ್ನು ಹೇಳುವುದು. 
  • ಯೋಚಿಸದೆ ಒಂದು ಕೆಲಸಕ್ಕೆ ಕೈ ಹಾಕುವುದು.
  • ಯೋಚಿಸದೆ ಮಾತನಾಡುವುದು.
  • ಭಾವನೆಯನ್ನು ಹತ್ತಿಕ್ಕಿಕೊಳ್ಳಲಾಗದೆ ಮನಸಿನ ಕೋಪವನ್ನು ಪರಿಣಾಮ ಯೋಚಿಸದೆ ಪ್ರದರ್ಶಿಸುವುದು.
  • ನಿರಂತರ ಚಲನೆ: ಯಾವುದೇ ಕಾರಣವಿಲ್ಲದೆ ಕೈ ಕಾಲು ಆಡಿಸುವುದು, ಓಡುವುದು, ನಿಂತಲ್ಲೇ ಕುಣಿಯುವುದು.
  • ರಾತ್ರಿ ನಿದ್ರೆ ಹೋಗಲು ನಿರಂತರ ಯೋಚನೆ ಅಡ್ಡಿಪಡಿಸುವುದು.
  • ನಿರಂತರವಾಗಿ ಚಡಪಡಿಸುವಿಕೆ ಮತ್ತು ಲಟಿಕೆ ಮುರಿಯುವುದು.
೨. ಅನವಧಾನ, ಗಮನ ವಿಕೇಂದ್ರೀಕರಣ: 
Image by diana.grytsku on Freepik

ಈ ಪ್ರಕಾರವನ್ನು ADD (Attention Deficit Disorder) ಎಂದೂ ಹೇಳುತ್ತಾರೆ. ಈ ಪ್ರಕಾರದ ಅಸ್ವಸ್ಥತೆಯಲ್ಲಿ ವ್ಯಕ್ತಿಯ ಗಮನದ ಅವಧಿ ಬಹಳ ಕಡಿಮೆಯಿರುತ್ತದೆ. ಯಾವುದೇ ಕೆಲಸದ ಮೇಲೆ ಸತತವಾಗಿ ಗಮನವಿಟ್ಟು ಕೆಲಸ ಮುಗಿಸಲು ಕಷ್ಟಪಡುತ್ತಾನೆ. ಅಲ್ಲದೆ ಯಾವುದೇ ಸಂಭಾಷಣೆಯ ಮೇಲೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಲಕ್ಷಣಗಳು :
  • ಅತ್ಯಂತ ಕಡಿಮೆ ಏಕಾಗ್ರತೆಯ ಅವಧಿ
  • ಬೇರೆಯವರನ್ನು ಕೇಳುವಾಗ ಸಂಪೂರ್ಣವಾಗಿ ತಮ್ಮ ಯೋಚನೆಯಲ್ಲಿ ಮುಳುಗಿ ಹೋಗುವುದು.
  • ಚಿಕ್ಕ ಪುಟ್ಟ ವಿವರಗಳಿಗೆ ಗಮನ ಕೊಡಲಾಗದೆ ಇರುವುದು.
  • ಮರೆವು.
  • ಸಂಘಟನಾ ಕೌಶಲ್ಯದ ಕೊರತೆ.
  • ಸುಲಭದಲ್ಲಿ ವಿಚಲಿತರಾಗುವುದು.
೩. ಸಂಯೋಜಿತ ADHD: 

ಇದು ADHD ಪ್ರಕರಣಗಳಲ್ಲಿ ಅತ್ಯಂತ ಸಾಮಾನ್ಯ ಪ್ರಕಾರವಾಗಿದೆ. ಇದರಲ್ಲಿ ವ್ಯಕ್ತಿಯು ತೀವ್ರ ಚಟುವಟಿಕೆ, ಹಠಾತ್ ಪ್ರವೃತ್ತಿ, ಚಂಚಲತೆ, ಅಜಾಗರೂಕತೆ ಮುಂತಾದ ಪ್ರವೃತ್ತಿಯನ್ನು ಪ್ರದರ್ಶಿಸುತ್ತಾನೆ.

ಲಕ್ಷಣಗಳು: 

ಮೇಲಿನ ಎರಡು ಪ್ರಕಾರಗಳ ಲಕ್ಷಣಗಳಲ್ಲಿ ಯಾವುದಾದರು ಅಥವಾ ಎಲ್ಲವೂ ಕಂಡುಬರಬಹುದು. ಇವುಗಳ ಜೊತೆಗೆ, ಎಡಿಎಚ್‌ಡಿ ಜನರು ರಾತ್ರಿಯ ನಿದ್ರೆಗಾಗಿ ಹೆಣಗಾಡುವ ಹೆಚ್ಚಿನ ಸಾಧ್ಯತೆಗಳಿವೆ, ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದಿರುವುದು, ಸ್ಥಿರತೆಯ ಕೊರತೆ, ಕೆಲವು ದಿನಗಳು/ತಿಂಗಳ ಹಿಂದೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ವಿಷಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು ಇವೆಲ್ಲವೂ ಕೂಡ ಇಂತಹ ಜನರಿಗೆ ಎದುರಾಗುವ ಕೆಲವು ಸವಾಲುಗಳು.

ಪ್ರಪಂಚದಾದ್ಯಂತ, ಎಡಿಎಚ್‌ಡಿಯಿಂದ ಬಳಲುತ್ತಿರುವವರಿಗೆ ಏಕಾಗ್ರತೆ, ಗಮನದ ಕೊರತೆಯು ಕಾಳಜಿಯ ಮುಖ್ಯ ಕ್ಷೇತ್ರವಾಗಿದೆ. ಏಕೆಂದರೆ ಯಾವುದಾದರೊಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಅವರಿಗೆ ಅಗತ್ಯವಿರುವಾಗಲೂ ಅವರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಇದು ಅಂತಿಮವಾಗಿ ಅವರಲ್ಲಿ ಬಹಳಷ್ಟು ಅಪರಾಧ ಮತ್ತು ಅವಮಾನಕರ ಭಾವನೆಗೆ ಕಾರಣವಾಗುತ್ತದೆ. ಈ ರೀತಿ ಇರುವುದಕ್ಕಾಗಿ ಅವರನ್ನು ಸಮಾಜ ತಪ್ಪಾಗಿ ಪರಿಗಣಿಸಬಹುದು.

ನಾನು ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಎಡಿಎಚ್‌ಡಿ ಜನರು ದಡ್ಡರಲ್ಲ, ಆದರೆ ಅವರ ಕೆಲಸ ಮಾಡುವ ವಿಧಾನವು ಉಳಿದೆಲ್ಲ  ಸಾಮಾನ್ಯರಿಗಿಂತ ಭಿನ್ನವಾಗಿರುತ್ತದೆ. ಎಡಿಎಚ್‌ಡಿ ಹೊಂದಿರುವ ಯಾರಾದರೂ ಹೆಚ್ಚಿನ ಐಕ್ಯೂ ಹೊಂದಿದ್ದರೆ, ಅವರು ತಮ್ಮ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬಹುದು ಆದರೆ ಅವರ ವೃತ್ತಿ ಜೀವನದಲ್ಲಿ ಶೋಚನೀಯವಾಗಿ ವಿಫಲರಾಗುತ್ತಾರೆ. ಆದರೆ ಗಮನದಲ್ಲಿಡಿ, ಇವು ಕೇವಲ ಸಾಧ್ಯತೆಯೇ ಹೊರತು ನಿಖರತೆಯಲ್ಲ.

night-photograph-starry-sky-night-sky-star-957040-957040.jpg
pexels-photo-210838-210838.jpg

ಎಡಿಎಚ್‌ಡಿ ತರಬೇತುದಾರರಾದ ಕರೇನ್ ಮಗಿಲ್ ಅವರ ಮಾತುಗಳಲ್ಲಿ, “ಎಡಿಎಚ್‌ಡಿ ಅಲ್ಲದವರ ಮೆದುಳು ಲೇಸರ್ ಕಿರಣದಂತೆ, ಇದು ಒಂದೇ ಪ್ರದೇಶದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಬಹಳ ದೂರವನ್ನು ತಲುಪುತ್ತದೆ ಆದರೆ ಎಡಿಎಚ್‌ಡಿ ಮೆದುಳು ಡಿಸ್ಕೋ ಲೈಟ್‌ಗಳಂತಿದ್ದು ಅದು ಸುತ್ತಲೂ ಎಲ್ಲ ದಿಕ್ಕುಗಳಲ್ಲೂ ಚಲಿಸುತ್ತದೆ ಮತ್ತು ದೂರವನ್ನು ತಲುಪುವುದಿಲ್ಲ”. ಎಡಿಎಚ್‌ಡಿ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದಕೆ  ಇದು ಸ್ಪಷ್ಟವಾದ ವಿವರಣೆ. ಅವರಿಗೆ, ಎಲ್ಲವೂ ಆಸಕ್ತಿದಾಯಕವೆಂದು ತೋರುತ್ತದೆ ಆದರೆ ಅವರ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಬಹಳ ಕಡಿಮೆ ಇರುವುದರಿಂದ ಅವರು ಯಾವುದರಲ್ಲೂ ಪರಿಣಿತರಾಗಲು ಕಷ್ಟ ಸಾಧ್ಯ .

ADHD/ADD ಗೆ ಕಾರಣಗಳು :

ADHD ಎನ್ನುವ ನರ ವೈವಿಧ್ಯತೆಯನ್ನು ಆಧುನಿಕ ವೈದ್ಯಕೀಯ ಲೋಕ ಸಾಕಷ್ಟು ಅಧ್ಯಯನ ಮಾಡಿದೆ. ಆದರೂ ಸಹ ಇಲ್ಲಿಯವರೆಗೆ ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಈಗಿರುವ ಮಾಹಿತಿ ಪ್ರಕಾರ ಇದು ಒಂದು ಅನುವಂಶಿಕ ಕಾಯಿಲೆ. ಇದನ್ನು ಶಬ್ದಶಃ ಕಾಯಿಲೆ ಎಂದು ಹೇಳಲಾಗದು. ಆದರೆ ಮಿದುಳಿನ ರಚನೆಯು ವಿಭಿನ್ನವಾಗಿರುತ್ತದೆ. ಇಂತಹ ಸಮಸ್ಯೆಗಳು ಒಂದೇ ಕುಟುಂಬದವರಲ್ಲಿ ಕಂಡುಬರುವ ಸಾಧ್ಯತೆ ಹೆಚ್ಚು.

ಪರಿಹಾರ:

ಇದೊಂದು ಜೀವಮಾನದ ಅಸ್ವಸ್ಥತೆ. ಯಾವುದೇ ಚಿಕಿತ್ಸೆ ಮೂಲಕ ಮೆದುಳಿನ ರಚನೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಿಲ್ಲ. ಆದರೆ ಕೆಲವೊಂದು ಜೀವನಶೈಲಿಯ ಬದಲಾವಣೆಯಿಂದ, ಕೆಲವೊಂದು ಉತ್ತೇಜಕ ಔಷಧಗಳಿಂದ ಹಿಡಿತದಲ್ಲಿ ಇಟ್ಟುಕೊಳ್ಳಬಹುದು.

ಉತ್ತೇಜಕ ಔಷಧಗಳು
pexels-photo-4058364-4058364.jpg

ತಜ್ಞ ವೈದ್ಯರುಗಳು ವ್ಯಕ್ತಿಯನ್ನು ತಪಾಸಣೆಗೊಳಿಸಿ ಅಸ್ವಸ್ಥತೆಯ ತೀವ್ರತೆಗನುಗುಣವಾಗಿ ಉತ್ತೇಜಕಗಳನ್ನು ನಿರ್ಧರಿಸುತ್ತಾರೆ. ಇದು ಮೆದುಳಿನಲ್ಲಿ ಬಿಡುಗಡೆಗೊಳ್ಳುವ ರಾಸಾಯನಿಕಗಳನ್ನು ಉತ್ತೇಜಿಸುತ್ತದೆ.. 

ಜೀವನಶೈಲಿಯ ಬದಲಾವಣೆ
pexels-photo-3767374-3767374.jpg

ಒಳ್ಳೆಯ ವ್ಯಾಯಾಮಗಳು, ಯೋಗ, ಮುದ್ರೆ, ಆಹಾರದಲ್ಲಿ ಸಕ್ಕರೆ ತ್ಯಜಿಸುವುದು, ಶಾಂತವಾದ ಸಂಗೀತ ಆಸ್ವಾದಿಸುವುದು ಇವೆಲ್ಲ ನೈಸರ್ಗಿಕವಾಗಿ ಡೋಪಮಿನ್( ಮೆದುಳಿನಲ್ಲಿ ಬಿಡುಗಡೆಗೊಳ್ಳುವ ಒಂದು ರಾಸಾಯನಿಕ) ಅನ್ನು ಉತ್ತೇಜಿಸುವ ಕ್ರಮಗಳಾಗಿವೆ.

ನನ್ನ ವೈಯಕ್ತಿಕ ಟಿಪ್ಪಣಿ… 

ಎಡಿಎಚ್‌ಡಿಯಂತಹ ಸಂಕೀರ್ಣ ನರಗಳ ವಿಭಿನ್ನ ಸ್ಥಿತಿಗಳ ಕುರಿತು ಸುದೀರ್ಘ ಲೇಖನವನ್ನು ಬರೆಯಲು ನಾನು ಪರಿಣಿತಳಲ್ಲ. ನಾನು ಸಹ ಈ ಮಾನಸಿಕ ಸ್ಥಿತಿಗೆ ಬಲಿಯಾಗಿದ್ದೇನೆ ಎಂದು ತಿಳಿದಾಗ ಅದು ನನ್ನ ಕಾಳಜಿಯ ವಿಷಯವಾಯಿತು. ನಾನು ವೈದ್ಯಕೀಯ ಸಹಾಯವನ್ನು ಪಡೆಯುವ ಬದಲು, ವಿವಿಧ ನೈಸರ್ಗಿಕ ವಿಧಾನದ ಮೂಲಕ ನನ್ನ ಮೇಲೆ ಕೆಲಸ ಮಾಡಲು ಪ್ರಯತ್ನಿಸಿದೆ. ಈ ಅವಧಿಯಲ್ಲಿ ನಾನು ಸ್ವಯಂ ಅನ್ವೇಷಣೆಯಲ್ಲಿ ಹೆಚ್ಚು ತೊಡಗಿಸಿಕೊಂಡಾಗ ನಾನು ಪಡೆದ ಅನುಭವಗಳು ಮತ್ತು ಜ್ಞಾನವು ನನ್ನ ಸಂಪೂರ್ಣ ವೆಬ್‌ಸೈಟ್ CosmiqGrace ನ ಆಧಾರವಾಗಿದೆ.

pexels-photo-3958784-3958784.jpg

ವೈದ್ಯಕೀಯ ಸಹಾಯವನ್ನು ಪಡೆಯುವುದು ನಿಮಗೆ ಕೆಟ್ಟದ್ದು ಎಂದು ಇಲ್ಲಿ ನಾನು ಎಲ್ಲಿಯೂ ಹೇಳುತ್ತಿಲ್ಲ, ಆದರೆ ಅದು ವೈಯಕ್ತಿಕ ಆಯ್ಕೆಯಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳುವವರು ತಮ್ಮ ಜೀವನದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ಅದು ಅಲೋಪತಿ ಅಥವಾ ಆಯುರ್ವೇದವಾಗಿರಬಹುದು. ಅಲೋಪತಿ ಔಷಧಿಗಳು ತಕ್ಷಣದ ಫಲಿತಾಂಶವನ್ನು ನೀಡುತ್ತವೆ ಆದರೆ ಆಯುರ್ವೇದವು ಸಮಸ್ಯೆಯ ಮೂಲ ಕಾರಣವನ್ನು ತಲುಪಲು ವ್ಯಕ್ತಿಯ ಮೇಲೆ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ.

ಕೊನೆಯದಾಗಿ…

ಸಮಸ್ಯೆ ಯಾವುದೇ ಇದ್ದರೂ ಅದನ್ನು ತಜ್ಞರೊಡನೆ ಸಮಾಲೋಚಿಸಿಯೇ ನಿರ್ಧಾರಕ್ಕೆ ಬರಬೇಕು. ಕೆಲವೊಂದು ಸಂದರ್ಭದಲ್ಲಿ ಸ್ವಯಂ ತಪಾಸಣೆಯು ಹಾನಿಕಾರಕವಾಗಬಹುದು. ಅದೇನೇ ಇದ್ದರೂ ನಮ್ಮ ತಪ್ಪುಗಳಿಗೆ ಈ ಮರೆವಿನ ಕಾಯಿಲೆಯನ್ನು ದೂಷಿಸದೆ ಅದರ ಜೊತೆಗೆ ಅದನ್ನು ನಿರ್ವಹಿಸುತ್ತಾ ಜೀವನ ನಡೆಸುವುದನ್ನು ಕಲಿಯುವುದೇ ಜಾಣ್ಮೆ. 


Discover more from cosmiqgrace.com

Subscribe to get the latest posts sent to your email.

1 comment

Leave a Reply

Author

cosmiqgrace@gmail.com

Related Posts