ಆಜ್ಞಾ ಚಕ್ರವು ಅತೀಂದ್ರಿಯ ಜ್ಞಾನ, ಸ್ವಯಂ ಸಾಕ್ಷಾತ್ಕಾರ, ಕಲ್ಪನೆ, ಆಧ್ಯಾತ್ಮಿಕ ಜ್ಞಾನ ಮುಂತಾದ ಗುಣಗಳನ್ನು ಉದ್ದೀಪನಗೊಳಿಸುವ ಚಕ್ರವಾಗಿದೆ. ಒಟ್ಟಾರೆ ಚಕ್ರ ವ್ಯವಸ್ಥೆಯಲ್ಲಿ ಆರನೇ ಚಕ್ರವಾಗಿಯೂ, ಮೇಲಿನ ಚಕ್ರಗಳ ವಿಭಾಗದಲ್ಲಿ ಎರಡನೇ ಚಕ್ರವಾಗಿಯೂ ಇದನ್ನು ಗುರುತಿಸಲಾಗಿದೆ.

ಆಜ್ಞಾ ಚಕ್ರ ಎಂದರೇನು?

ಆಜ್ಞಾ ಅಂದರೆ ಸಂಸ್ಕೃತದಲ್ಲಿ ಆಜ್ಞೆ, ಅಗ್ರಗಣ್ಯ ಮುಂತಾದ ಅರ್ಥಗಳಿವೆ. ಈ ಚಕ್ರಕ್ಕೆ ಆಜ್ಞಾ ಚಕ್ರ ಎಂದು ಹೆಸರಿಸಲು ಕಾರಣ ಇದು ಚಕ್ರಗಳಲ್ಲಿ ಅಗ್ರ ಗಣ್ಯವಾಗಿದೆ. ಮೆದುಳಿನ ಮಧ್ಯದಲ್ಲಿ ಇರುವುದರಿಂದ ಎಲ್ಲಾ ರೀತಿಯ ಗ್ರಹಿಕೆಗಳನ್ನು ಇದು ನಿರ್ವಹಿಸುತ್ತದೆ. ನಮ್ಮ ಭೌತಿಕ ಶರೀರಕ್ಕೆ ಮೆದುಳು ಎಷ್ಟು ಮುಖ್ಯ ಎಂದು ವಿಜ್ಞಾನವೇ ವಿವರಿಸುತ್ತದೆ.

ಆಜ್ಞಾ ಚಕ್ರ ಎಲ್ಲಿದೆ?

ಮೆದುಳಿನ ಮಧ್ಯಭಾಗದಲ್ಲಿ ಕಣ್ಣು ಹುಬ್ಬಿನ ಮಟ್ಟದಲ್ಲಿ ಇದರ ಸ್ಥಳವಿದೆ. ಇಲ್ಲಿಂದ ಇದು ಇಡೀ ದೇಹ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಮೂರನೇ ಕಣ್ಣಿನ ಚಕ್ರ ಎಂದೂ ಸಹ ಹೇಳುತ್ತಾರೆ. ಮೂರನೇ ಕಣ್ಣು ವರ್ತಮಾನವನ್ನಷ್ಟೆ ಅಲ್ಲದೆ ಭೂತ ಮತ್ತು ಭವಿಷ್ಯ ಕಾಲವನ್ನು ನೋಡಬಲ್ಲದು. ಏಕೆಂದರೆ ಇದು ಸುಪ್ತ ಮನಸ್ಸಿನ ಜೊತೆ ನಿಕಟ ಸಂಪರ್ಕದಲ್ಲಿ ಇರುತ್ತದೆ.

ಆಜ್ಞಾ ಚಕ್ರದ ಗುಣ ಲಕ್ಷಣಗಳು

ಆಜ್ಞಾ ಚಕ್ರವು ತನ್ನದೇ ಆದ ಬಣ್ಣ, ಕಂಪನ, ಚಿನ್ಹೆಗಳನ್ನು ಹೊಂದಿದೆ. ಅಂತಹ ಗುಣಲಕ್ಷಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

ಬಣ್ಣ : ಗಾಢ ನೀಲಿ ಅಥವಾ ಇಂಡಿಗೋ

ಚಿನ್ಹೆ :

ಕಂಪನ: 963 hz

ಬೀಜಮಂತ್ರ : ಓಂ

ತತ್ವ : ಬೆಳಕು

ಆಜ್ಞಾ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ

ಈ ಚಕ್ರವು ಸಹಸ್ರಾರ ಚಕ್ರದ ನಂತರದ ಉನ್ನತ ಮಟ್ಟದ ಚಕ್ರವಾಗಿರುವುದರಿಂದ ಇದರ ತತ್ವವನ್ನು ಬೆಳಕು ಎಂದು ಗುರುತಿಸಲಾಗಿದೆ. ಬೆಳಕೆಂದರೆ ಆಧ್ಯಾತ್ಮಿಕ ಒಳನೋಟ, ಜ್ಞಾನ, ಸ್ಪಷ್ಟತೆ ಮುಂತಾಗಿ ಅರ್ಥೈಸಬಹುದು.

ಚಕ್ರದ ಚಿನ್ಹೆಯಲ್ಲಿ ಎರಡು ದಳಗಳುಳ್ಳ ಕಮಲವನ್ನು ನೋಡಬಹುದು. ಈ ಎರಡು ದಳಗಳು ಇಡ ಮತ್ತು ಪಿಂಗಳ ನಾಡಿಯನ್ನು ಸೂಚಿಸುತ್ತದೆ. ಇಡ ಮತ್ತು ಪಿಂಗಳ ನಾಡಿಯು ಮೂಲಾಧಾರ ಚಕ್ರದಿಂದ ಆಜ್ಞಾ ಚಕ್ರದವರೆಗೂ ಬೆನ್ನು ಮೂಳೆಯ ಮಾರ್ಗವಾಗಿ ಮೇಲೇರಿ ಸುಷುಮ್ನ ನಾಡಿಯನ್ನು ಸೇರುತ್ತದೆ. ಸುಷುಮ್ನ ನಾಡಿಯು ಎಲ್ಲಾ ಚಕ್ರದ ಶಕ್ತಿಯನ್ನು ಸಹಸ್ರಾರ ಚಕ್ರಕ್ಕೆ ತಲುಪಿಸುತ್ತದೆ. ಇವು ನಮ್ಮ ದೇಹದ ಸೂಕ್ಷ್ಮ ಶಕ್ತಿ ವಾಹಿನಿಯಾಗಿದ್ದು, ಪುರುಷ ಮತ್ತು ಸ್ತ್ರೀ ಶಕ್ತಿಯ ಸಂಕೇತವಾಗಿರುತ್ತದೆ. ಅದನ್ನು ಯಿನ್ ಮತ್ತು ಯಾನ್ ಶಕ್ತಿ ಎಂದೂ ಹೇಳಬಹುದು. ಮತ್ತು ಸುಷುಮ್ನ ನಾಡಿಯು ತಟಸ್ಥ ಶಕ್ತಿವಾಹಿನಿಯಾಗಿದೆ.

ಇನ್ನು ಈ ಚಿನೆಯಲ್ಲಿರುವ ಕೆಳಮುಖದ ತ್ರಿಕೋನವು ಜ್ಞಾನೋದಯ, ದೈವಿಕತೆ ಜೊತೆ ಸಂಪರ್ಕವನ್ನು ತೋರಿಸುತ್ತದೆ. ಇದರ ಬೀಜಮಂತ್ರವಾದ ಓಂ ಜಗತ್ತಿನ ಮೂಲಭೂತ ಶಬ್ದವೆಂದು ಹೇಳಲಾಗುತ್ತದೆ ಏಕೆಂದರೆ ಇದರಿಂದಲೇ ಎಲ್ಲಾ ಶಬ್ದಗಳೂ ಉತ್ಪತ್ತಿಯಾಗುತ್ತವೆ. ಈ ಚಕ್ರವು ಲೌಕಿಕ ಜಗತ್ತಿನಿಂದ ಆಧ್ಯಾತ್ಮ ಜಗತ್ತಿನೆಡೆಗೆ ಹೊರಳುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಇದು ಸಕ್ರಿಯಗೊಂಡರೆ ವ್ಯಕ್ತಿಯು ಭೂತ, ವರ್ತಮಾನ, ಭವಿಷ್ಯತ್ ಕಾಲಗಳನ್ನು ನೋಡಬಲ್ಲವನಾಗುತ್ತಾನೆ.

ಸಂತುಲಿತ ಆಜ್ಞಾ ಚಕ್ರ

ಆಜ್ಞಾ ಚಕ್ರವನ್ನು ಸಕ್ರಿಯಗೊಳಿಸುವುದು ಸುಲಭದ ಮಾತಲ್ಲ. ಆದರೂ ಕಠಿಣ ಸಾಧನೆಯಿಂದ ಸಾಧ್ಯವಿದೆ. ಸಕ್ರಿಯವಲ್ಲದಿದ್ದರೂ ಚಕ್ರವು ಸಂತುಲಿತವಾಗಿದ್ದರೆ ದೈಹಿಕವಾಗಿಯೂ ನಾವು ಉತ್ತಮ ಗುಣಮಟ್ಟದ ಜೀವನ ಹೊಂದಲು ಸಾಧ್ಯವಿದೆ. ಏಕೆಂದರೆ ಆಜ್ಞಾ ಚಕ್ರವು ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯನ್ನೂ ಉತ್ತೇಜಿಸುತ್ತದೆ. ಈ ಪಿಟ್ಯುಟರಿ ಗ್ರಂಥಿಯು ದೇಹದ ಬೆಳವಣಿಗೆಗೆ ಮತ್ತು ಉತ್ತಮ ಮಾನಸಿಕ ಆರೋಗ್ಯಕ್ಕೆ ಬೇಕಾದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಉತ್ತಮವಾಗಿ ಸಂತುಲಿತದಲ್ಲಿರುವ ಆಜ್ಞಾ ಚಕ್ರವು ವ್ಯಕ್ತಿಗೆ ಈ ಕೆಳಗಿನ ಅನುಭವ ನೀಡುತ್ತದೆ.

  • ಆಧ್ಯಾತ್ಮ ಜ್ಞಾನ.
  • ಅಂತರ್ದೃಷ್ಟಿ, ಸ್ವಯಂ ಪ್ರಜ್ಞೆ ಮತ್ತು ಅತೀಂದ್ರಿಯ ಶಕ್ತಿ.
  • ಉತ್ತಮ ಗಮನ ಮತ್ತು ಸ್ಪಷ್ಟತೆ.
  • ದೈಹಿಕ ಮತ್ತು ಮಾನಸಿಕ ಆರೋಗ್ಯ
ಅಸಂತುಲಿತ ಆಜ್ಞಾ ಚಕ್ರ

ಈಗಾಗಲೇ ಮೇಲೆ ಹೇಳಿದಂತೆ ಆಜ್ಞಾ ಚಕ್ರವು ಪಿಟ್ಯುಟರಿ ಗ್ರಂಥಿಯನ್ನೆ ನಿಯಂತ್ರಿಸುವುದರಿಂದ ಅದರ ಕೆಲಸದಲ್ಲಿನ ಏರು ಪೇರು ಇಡೀ ದೇಹ, ಮನಸ್ಸಿಗೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಹ ಕೆಲವೊಂದು ಲಕ್ಷಣಗಳನ್ನು ಕೆಳಗೆ ನೀಡುವ ಪ್ರಯತ್ನ ಮಾಡಿದ್ದೇನೆ. ಇಂತಹ ಲಕ್ಷಣಗಳು ಕಂಡುಬಂದರೆ, ಆಜ್ಞಾ ಚಕ್ರದ ಮೇಲೆ ಗಮನ ಹರಿಸುವುದು ಒಳಿತು.

ದೈಹಿಕ ಲಕ್ಷಣಗಳು
  • ಮೈಗ್ರೇನ್ ಮುಂತಾದ ತಲೆನೋವು
  • ದೃಷ್ಟಿ ಸಮಸ್ಯೆ
  • ಕಿವಿಯ ಸಮಸ್ಯೆ
  • ಸೈನಸ್ ಸಮಸ್ಯೆ
  • ನಿದ್ರಾಹೀನತೆ
ಮಾನಸಿಕ ಲಕ್ಷಣಗಳು
  • ಗೊಂದಲ, ಆತಂಕ, ಸ್ಪಷ್ಟತೆ ಇಲ್ಲದಿರುವುದು.
  • ಅಂತಃ ಪ್ರಜ್ಞೆಯ ಕೊರತೆ
  • ಸೃಜನಾತ್ಮಕತೆಯ ಕೊರತೆ
  • ಏಕಾಗ್ರತೆಯ ಕೊರತೆ.
  • ಕೆಟ್ಟ ಕನಸುಗಳು.
  • ಅಹಂಕಾರ.
ಅಸಂತುಲಿತ ಆಜ್ಞಾ ಚಕ್ರವನ್ನು ಸಂತುಲಿತ ಗೊಳಿಸುವುದು.

ನಮ್ಮ ದೇಹದ ಪ್ರತಿಯೊಂದು ಚಕ್ರವೂ ಸಂತುಲಿತವಾಗಿರಬೇಕು. ಸಂತುಲಿತಗೊಂಡ ಮೇಲೆ ಇನ್ನಷ್ಟು ಸಾಧನೆಯಿಂದ ಸಕ್ರಿಯಗೊಳಿಸಬಹುದು. ನಮ್ಮ ನಿಮ್ಮಂತಹ ಸಾಮಾನ್ಯರಿಗೆ ಸಕ್ರಿಯಗೊಳಿಸಲು ಸಾಧ್ಯವಾಗದೇ ಹೋದರೂ ಅಸಂತುಲಿತ ಗೊಂಡ ಚಕ್ರವನ್ನು ಸಂತುಲಿತಗೊಳಿಸಲು ಸಾಧ್ಯವಿದ್ದೇ ಇದೆ. ನಮ್ಮ ಜೀವನದಲ್ಲಿ ನಮ್ಮ ಅನುಭವದ ಆಧಾರದ ಮೇಲೆ ಚಕ್ರವು ಕೆಲವೊಂದು ಕಾರಣಗಳಿಂದ ನಿಷ್ಕ್ರಿಯ ಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅದನ್ನು ಗಮನಿಸಿ, ಪುನಃ ಸಂತುಲಿತಗೊಳಿಸಿದರೆ ನಾವು ಕಳೆದುಕೊಂಡ ಆರೋಗ್ಯವನ್ನು ಪುನಃ ಗಳಿಸಬಹುದು. ಆಜ್ಞಾ ಚಕ್ರವನ್ನು ಸಂತುಲಿತ ಗೊಳಿಸುವ ಕೆಲವೊಂದು ವಿಧಾನವನ್ನು ಇಲ್ಲಿ ಹೇಳಲಾಗಿದೆ.

೧. ಮಂತ್ರ

ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ನಂತರ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ಆಜ್ಞಾ ಚಕ್ರದ ಮಂತ್ರ ‘ಓಂ’. ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ಆಜ್ಞಾ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು.

೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:

ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ಆಜ್ಞಾ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದು.

  • “ನನ್ನೊಳಗಿನ ಜ್ಞಾನದ ಮೇಲೆ ನನಗೆ ವಿಶ್ವಾಸವಿದೆ.”
  • “ನನ್ನ ಅಂತಃ ಪ್ರಜ್ಞೆ ನನ್ನನ್ನು ಮಾರ್ಗದರ್ಶಿಸುತ್ತದೆ .”
  • “ದೈವಿಕ ಮಾರ್ಗದರ್ಶನದಂತೆ ನಾನು ನನ್ನ ಕೆಲಸವನ್ನು ಮಾಡುತ್ತೇನೆ.”
  • “ನಾನು ಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿ ಇರುತ್ತೇನೆ.”
  • “ನನ್ನ ಭಾವನೆಗಳನ್ನು ನಾನು ಗೌರವಿಸುತ್ತೇನೆ.”

ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.

೩. ಧ್ಯಾನ

ಆನ ಪಾನ ಸತಿ ಇತ್ಯಾದಿ ಧ್ಯಾನವು ಆಜ್ಞಾ ಚಕ್ರವನ್ನು ಸಂತುಲಿತಗೊಳಿಸಲು ಒಂದು ಉತ್ತಮ ಸಾಧನವಾಗಿದೆ. ಇದರ ಜೊತೆಗೆ ಇತರ ಧ್ಯಾನ ವಿಧಾನಗಳನ್ನು ಪ್ರಯತ್ನಿಸಬಹುದು. ಇಂತಹ ಧ್ಯಾನಗಳು ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸುವುದರಿಂದ ಆಜ್ಞಾ ಚಕ್ರದ ಸಂತುಲತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.

೪. ಇಂಡಿಗೋ ಬಣ್ಣದ ಬಳಕೆ

ಈ ಚಕ್ರವು ಇಂಡಿಗೋ ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ಇಂಡಿಗೋ ಬಣ್ಣ ಬಳಸಿ. ಇಂಡಿಗೋ ಪರದೆ, ಇಂಡಿಗೋಬ ಣ್ಣದ ಧ್ಯಾನದ ಆಸನ, ಇತ್ಯಾದಿ. ಇಂಡಿಗೋ ಬಟ್ಟೆಯನ್ನೂ ಹೆಚ್ಚು ಹೆಚ್ಚು ಧರಿಸಬಹುದು.

೫. ರೇಕಿ

ರೇಕಿಯನ್ನು ಆಜ್ಞಾ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.

೬. ಯೋಗಾಸನ

ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ಆಜ್ಞಾ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ಶೀರ್ಷಾಸನ, ಹಲಾಸನ, ಬಾಲಸಾನ, ಅಧೋ ಮುಖ ಶ್ವಾನಾಸನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು.

ಕೊನೆಯದಾಗಿ…

ಆಜ್ಞಾ ಚಕ್ರವು ನಮ್ಮ ಮೆದುಳಿನ ಭಾಗವನ್ನು ನಿಯಂತ್ರಿಸುತ್ತದೆ, ಮೆದುಳು ನಮ್ಮ ಶರೀರ, ಮನಸ್ಸನ್ನು ನಿಯಂತ್ರಿಸುತ್ತದೆ. ಹಾಗಾಗಿ ಈಗ ಆಜ್ಞಾ ಚಕ್ರದ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳಲು ಕಷ್ಟವಿಲ್ಲ. ನಮ್ಮ ದಿನ ನಿತ್ಯದ ಜೀವನದಲ್ಲಿ ಸ್ವಲ್ಪ ಕಷ್ಟಪಟ್ಟು ಆಜ್ಞಾ ಚಕ್ರದ ಆರೋಗ್ಯಕ್ಕೆ ಸ್ವಲ್ಪ ಸಮಯವಿಟ್ಟು ನೋಡಿಕೊಂಡರೆ ಅದು ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ.


Discover more from cosmiqgrace.com

Subscribe to get the latest posts sent to your email.

Leave a Reply

Author

cosmiqgrace@gmail.com

Related Posts