ಅನಾಹತ ಚಕ್ರ ಎಂದರೇನು?
ಅನಾಹತ ಅಂದರೆ ಅರ್ಥ ಹತವಾಗದೆ ಇರುವಂತಹುದು, ಗಾಯಾಗೊಳ್ಳದೆ ಇರುವಂತಹುದು ಎಂದು. ಕೆಳಗಿನ ಮೂರು ಚಕ್ರಗಳು ಮತ್ತು ಮೇಲಿನ ಮೂರು ಚಕ್ರಗಳ ನಡುವೆ ಸೇತುವೆಯಂತೆ ಈ ಚಕ್ರ ಕೆಲಸ ಮಾಡುತ್ತದೆ. ಕೆಳಗಿನ ಮೂರು ಚಕ್ರಗಳು ಲೌಕಿಕ ಜಗತ್ತು ಮತ್ತು ಮೇಲಿನ ಮೂರು ಚಕ್ರಗಳು ಆಧ್ಯಾತ್ಮಿಕ ಜಗತ್ತನ್ನು ಸೂಚಿಸುತ್ತದೆ. ಅನಾಹತ ಚಕ್ರವು ನಮ್ಮಲ್ಲಿ ಎರಡನ್ನೂ ಸಮತೋಲನದಲ್ಲಿ ಇಡುವ ಕೆಲಸವನ್ನು ಮಾಡುತ್ತದೆ.
ಅನಾಹತ ಚಕ್ರ ಎಲ್ಲಿದೆ?
ಈ ಮೇಲೆ ಹೇಳಿದಂತೆ ಅನಾಹತ ಚಕ್ರದ ಸ್ಥಳ ನಮ್ಮ ಹೃದಯ ಭಾಗದಲ್ಲಿ. ಇದು ನಮ್ಮ ಎಲ್ಲಾ ಪ್ರೀತಿ, ಮಮತೆ ಮುಂತಾದ ಭಾವನೆಗಳಿಗೆ ಕಾರಣವಾಗಿದೆ. ಈ ಚಕ್ರದ ಶಕ್ತಿಯನ್ನು ಸಮತೋಲನದಲ್ಲಿ ಇರಿಸಿಕೊಂಡರೆ ನಿಷ್ಕಲ್ಮಶ ಪ್ರೇಮವನ್ನು ನಮ್ಮ ಅನುಭವಕ್ಕೆ ತರಬಹುದು.
ಅನಾಹತ ಚಕ್ರದ ಗುಣಲಕ್ಷಣಗಳು
ಅನಾಹತ ಚಕ್ರವು ವಾಯು ತತ್ವವನ್ನು ಪ್ರತಿನಿಧಿಸುತ್ತದೆ. ವಾಯುವಿಗೆ ಯಾವುದೇ ಬಣ್ಣವಿಲ್ಲಾಡಿದ್ದರೂ ಸಹ ಮೇಲಿನ(ವಿಶುದ್ಧಿ) ಚಕ್ರದ ಆಕಾಶ ತತ್ವ ಮತ್ತು ಕೆಳಗಿನ(ಮಣಿಪುರ) ಚಕ್ರದ ಅಗ್ನಿ ತತ್ವ ಇದರ ಮೇಲೆ ಪ್ರತಿಬಿಂಬಿಸಿ ಹಸಿರು ಬಣ್ಣವನ್ನು ಸೂಚಿಸುತ್ತದೆ. ಕೆಲವರ ಪ್ರಕಾರ ತಿಳಿ ಗುಲಾಬಿ ಬಣ್ಣವೂ ಸಹ ಅನಾಹತ ಚಕ್ರವನ್ನು ಪ್ರತಿನಿಧಿಸುತ್ತದೆ. ಇದರ ಮತ್ತಷ್ಟು ಗುಣಲಕ್ಷಣಗಳು ಇಂತಿವೆ.
ಬಣ್ಣ : ಹಸಿರು/ ತಿಳಿ ಗುಲಾಬಿ
ಚಿನ್ಹೆ :
ಕಂಪನ : 639 hz
ಬೀಜಮಂತ್ರ : ಯಂ
ತತ್ವ : ವಾಯು
ಅನಾಹತ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ
ಅನಾಹತ ಚಕ್ರವು ದೇಹದಲ್ಲಿ ಹರಿಯುವ ಪ್ರಾಣಶಕ್ತಿಯ ಸಂಗ್ರಹ ಮತ್ತು ಎಲ್ಲಾ ಭಾಗಗಳಿಗೆ ವಿತರಣೆ ಮಾಡುತ್ತದೆ. ವಾಯುತತ್ವವು ದೇಹದಲ್ಲಿ ಸಮತೋಲನ ಪ್ರಮಾಣದಲ್ಲಿರುವಂತೆಯೂ ನೋಡಿಕೊಳ್ಳುತ್ತದೆ. ಭೌತಿಕ ಹೃದಯದ ಬಳಿ ಇರುವುದರಿಂದ ಅದರ ಮತ್ತು ಅದರ ಸುತ್ತ ಮುತ್ತಲಿನ ಅಂಗಾಂಗಗಳನ್ನು ನಿಯಂತ್ರಿಸುತ್ತದೆ. ಅಂದರೆ ಹೃದಯ, ಶ್ವಾಸಕೋಶ, ಥೈಮಸ್ ಗ್ರಂಥಿ ಮುಂತಾದ ಅಂಗಗಳು ಈ ಚಕ್ರದ ನಿಯಂತ್ರಣದಲ್ಲಿವೆ.
ಈ ಚಕ್ರ ವಾಯು ತತ್ವವಾಗಿರುವುದರಿಂದ ನಾವು ಉಸಿರಾಡಿ ತೆಗೆದುಕೊಳ್ಳುವ ಗಾಳಿಯೂ ಕೂಡ ಇದರ ನಿಯಂತ್ರಣದಲ್ಲೇ ಇದೆ. ವಾಯು ತತ್ವವು ನಮ್ಮ ದೇಹದಲ್ಲಿ ಸಮತೋಲನದಿಂದ ಇದ್ದರೆ ಸಾಮಾನ್ಯವಾಗಿ ನಮ್ಮ ಭಾವನಾತ್ಮಕ ಆರೋಗ್ಯವೂ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ದೀರ್ಘ ಶ್ವಾಸದ ಪ್ರಾಮುಖ್ಯತೆಯನ್ನು ನಮ್ಮ ಯೋಗಿಗಳು ಒತ್ತಿ ಹೇಳಿರುವುದು.
ಈ ಚಕ್ರವು ಬೇಷರತ್ ಪ್ರೀತಿಯನ್ನು ಜಗತ್ತಿನ ಎಲ್ಲ ಜೀವಿಗಳಿಗೂ ನೀಡುವಂತೆ ಪ್ರೇರೇಪಿಸುತ್ತದೆ. ಅಂತಹ ಪ್ರೀತಿಯನ್ನು ನೀಡುವ ವ್ಯಕ್ತಿಯ ಒಳಗೂ ಸಾಕಷ್ಟು ನಿಷ್ಕಲ್ಮಶ ಪ್ರೇಮವಿರುತ್ತದೆ. ಜಗತ್ತಿನ ಎಲ್ಲ ಜೀವಿಗಳನ್ನು ಏಕರೀತಿಯಿಂದ ನೋಡಲು ಸಹಾಯ ಮಾಡುತ್ತದೆ. ಈ ಚಕ್ರವು ಹೆಚ್ಚೆಚ್ಚು ಬಲಿಷ್ಠವಾದಂತೆ ನಮ್ಮ ಹೃದಯದ ಆಸೆ ಪೂರೈಸುವ ಸಂಭವವೂ ಹೆಚ್ಚುತ್ತದೆ.
ಈ ಚಕ್ರದ ಚಿನ್ಹೆ ಯಲ್ಲಿ ಹನ್ನೆರಡು ದಳಗಳು ಮತ್ತು ಮಧ್ಯೆ ಒಂದೊಕ್ಕೊಂದು ಕೂಡುವ ಮೇಲ್ಮುಖ ಮತ್ತು ಕೆಳಮುಖವಾಗಿರುವ ಎರಡು ತ್ರಿಕೋನವನ್ನು ನೋಡುತ್ತೇವೆ. ಈ ಎರಡು ತ್ರಿಕೋನಗಳು ಮೇಲಿನ ಮತ್ತು ಕೆಳಗಿನ ಚಕ್ರಗಳ ಸಮತೋಲನವನ್ನು ಸೂಚಿಸುತ್ತದೆ. ನಮ್ಮ ಚಿತ್ತವು ಮೇಲಿನ ಚಕ್ರಗಳ ಕಡೆ ಹೋದರೆ ಅದು ಭಕ್ತಿಯಾಗುತ್ತದೆ. ಇಲ್ಲಿ ಯಾವುದೇ ಬಾಧವ್ಯಗಳ ಕಡೆ ಚಿತ್ತ ಸೆಳೆಯದೆ ದೈವಿಕ ಪ್ರೇಮವೊಂದೆ ಮನವು ಅನುಭವಿಸುತ್ತದೆ. ಆದರೆ ಚಿತ್ತವು ಕೆಳಗಿನ ಚಕ್ರಗಳ ಕಡೆ ಹೋಗತೊಡಗಿದರೆ ಕೇವಲ ಲೌಕಿಕ ಬಾಂಧವ್ಯಗಳನ್ನೆ ನೆಚ್ಚಿಕೊಂಡು ಮಾಯೆಯ ಭ್ರಮೆಯಲ್ಲಿ ಮನುಷ್ಯ ಸಿಕ್ಕಿ ಕೊಳ್ಳುತ್ತಾನೆ. ಹನ್ನೆರಡು ದಳಗಳು ದೈವಿಕ ಗುಣಗಳಾದ ಶಾಂತಿ, ಸಾಮರಸ್ಯ, ಆನಂದ, ಪ್ರೇಮ, ತಿಳುವಳಿಕೆ, ಸ್ಪಷ್ಟತೆ, ಶುದ್ಧತೆ, ದಯೆ, ಕರುಣೆ, ಸಹಾನುಭೂತಿ, ಕ್ಷಮೆ ಮತ್ತು ಏಕತೆಯನ್ನು ಸೂಚಿಸುತ್ತದೆ.
ಸಂತುಲಿತ ಅನಾಹತ ಚಕ್ರ
ಅನಾಹತ ಚಕ್ರವು ಸಮತೋಲನ ಕಾಯ್ದುಕೊಂಡರೆ ವ್ಯಕ್ತಿಯ ಹೃದಯವು ನಿಷ್ಕಲ್ಮಶವಾಗಿರುತ್ತದೆ. ಅವನ ಹೃದಯದಲ್ಲಿ ಎಷ್ಟು ಪ್ರೀತಿಯಿರುತ್ತದೆ ಅಂದರೆ ಜಗತ್ತಿನ ಎಲ್ಲಾ ಜೀವಿಗಳಿಗೆ ಹಂಚಿಯೂ ಇನ್ನಷ್ಟು ಉಳಿಯುವಷ್ಟು. ಸಂತುಲಿತ ಅನಾಹತ ಚಕ್ರ ಹೊಂದಿರುವ ವ್ಯಕ್ತಿಯನ್ನು ಈ ಕೆಳಗಿನ ಲಕ್ಷಣಗಳಿಂದ ಗುರುತಿಸಬಹುದು.
- ತನ್ನನ್ನು ಮತ್ತು ಇತರರನ್ನು ಗೌರವಿಸುವುದು. ಮತ್ತು ಹಾಗಾಗಿ ಇತರರಿಂದ ಸಾಕಷ್ಟು ಗೌರವವನ್ನೂ ಪಡೆದುಕೊಳ್ಳುವುದು
- ತನ್ನನ್ನು ಮತ್ತು ಇತರರನ್ನು ಪ್ರೀತಿಸುವುದು. ಮತ್ತು ಇತರರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುವುದು.
- ತನ್ನ ಸುತ್ತಲಿನ ಜೀವಿಗಳಿಗೆ ದಯೆ ತೋರುವುದು
- ನಂಬಿಕೆ ತೋರುವುದು
- ನಿಸ್ವಾರ್ಥತೆ
ಅಸಂತುಲಿತ ಅನಾಹತ ಚಕ್ರ
ಅನಾಹತ ಚಕ್ರವು ಸುಪ್ತವಾಗಿದ್ದರೆ ಅಥವಾ ಅತಿ ಕ್ರಿಯಾಶೀಲವಾಗಿದ್ದರೆ ಕೆಲವೊಂದು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಈ ಚಕ್ರವು ಬೇಕಾದ ಶಕ್ತಿಯನ್ನು ಪಡೆಯದಿದ್ದರೆ ಏಕಾಂಗಿತನದ ಸಮಸ್ಯೆ ಕಾಣಬಹುದು ಮತ್ತು ತಮ್ಮ ಜೊತೆ ತಾವೇ ಉತ್ತಮ ಸಂಬಂಧ ಹೊಂದದೇ ಇರಬಹುದು. ಅಂತಹ ಕೆಲವೊಂದು ಲಕ್ಷಣಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ
ದೈಹಿಕ ಲಕ್ಷಣಗಳು
- ಹೃದಯ ಬಡಿತದಲ್ಲಿ ಏರುಪೇರು
- ಕಡಿಮೆ ರಕ್ತ ಪರಿಚಲನೆ
- ಎದೆನೋವು
- ಅಸ್ತಮಾ
- ಗಂಟಲು ಬೇನೆ
- ಹೆಗಲುನೋವು
- ಕೈನೋವು
ಮಾನಸಿಕ ಲಕ್ಷಣಗಳು
- ತಿರಸ್ಕಾರದ ಭಯ.
- ಯಾವುದೇ ಸಂಬಂಧದಲ್ಲಿ ಅತಿಯಾದ ಅವಲಂಬನೆ.
- ಎಷ್ಟೇ ಪ್ರೀತಿ ತೋರಿದರೂ ಅದಕ್ಕೆ ಪ್ರತಿಯಾಗಿ ತಕ್ಕ ಪ್ರೀತಿ ಸಿಗದೆ ಇರುವುದು.
- ನಿಸ್ವಾರ್ಥ ಪ್ರೀತಿಯಂತೆ ತೋರಿದರೂ ಅದಕ್ಕೆ ಪ್ರತಿಯಾಗಿ ಏನನ್ನಾದರೂ ನಿರೀಕ್ಷಿಸುವುದು.
- ದಯೆ ಕರುಣೆ ಮುಂತಾದುವುಗಳ ಕೊರತೆ
- ಪ್ರೀತಿಯನ್ನು ಹಣ, ಉಡುಗೊರೆಯಿಂದ ಕೊಂಡುಕೊಳ್ಳಬಹುದು ಎಂಬ ನಂಬಿಕೆ.
- ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ನಂಬಿಕೆಯ ಕೊರತೆ.
- ಕ್ಷಮಿಸುವ ಮನಸ್ಥಿತಿ ಇಲ್ಲದಿರುವುದು.
ಅಸಂತುಲಿತ ಅನಾಹತ ಚಕ್ರವನ್ನು ಸಂತುಲಿತಗೊಳಿಸುವುದು.
ಅನಾಹತ ಚಕ್ರವು ನಮ್ಮಲ್ಲಿ ಪ್ರೀತಿ, ದಯೆ, ಕರುಣೆ ಮುಂತಾದ ಗುಣಗಳನ್ನು ತರುತ್ತದೆ. ಈ ಪ್ರೀತಿ, ದಯೆ ಇತರರಿಗೆ ತೋರುವ ಗುಣವಷ್ಟೇ ಆಗದೆ ನಮ್ಮ ಮೇಲೂ ನಮಗೆ ಒಂದಿಷ್ಟು ಇರಬೇಕು. ಇವು ಸಾಧ್ಯವಾಗುವುದು ಈ ಅನಾಹತ ಚಕ್ರವು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಾಗ ಮಾತ್ರ. ಹಾಗಾಗಿ ಮಾನಸಿಕ ಆರೋಗ್ಯಕ್ಕಾಗಿಯೂ ಸಹ ವ್ಯಕ್ತಿಯು ತನ್ನ ಅನಾಹತ ಚಕ್ರದ ಕಡೆಗೆ ಗಮನ ಹರಿಸಿ ಅದನ್ನು ಸಂತುಲಿತಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಅಂತಹ ಕೆಲವೊಂದು ನೈಸರ್ಗಿಕ ವಿಧಾನಗಳು ಇಲ್ಲಿವೆ.
೧. ಮಂತ್ರ:
ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ನಂತರ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ಅನಾಹತ ಚಕ್ರದ ಮಂತ್ರ ‘ಯಂ’. ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ಅನಾಹತ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು.
೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:
ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ಅನಾಹತ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದು.
- “ನನ್ನನ್ನು ನಾನು ಪ್ರೀತಿಸುತ್ತೇನೆ.”
- “ನಾನು ಇದ್ದ ಹಾಗೆ ನನ್ನನ್ನು ನಾನು ಸ್ವೀಕರಿಸುತ್ತೇನೆ.”
- “ನಾನು ಎಲ್ಲರಿಂದ ಪ್ರೀತಿಸಲ್ಪಡುತ್ತಿದ್ದೇನೆ.”
- “ನಾನು ಈ ಹಿಂದೆ ಮಾಡಿದ ತಪ್ಪುಗಳಿಗಾಗಿ ನನ್ನನ್ನು ನಾನು ಕ್ಷಮಿಸಿದ್ದೇನೆ.”
- “ನನ್ನನ್ನು ನೋಯಿಸಿದ ಎಲ್ಲರನ್ನೂ ನಾನು ಕ್ಷಮಿಸಿದ್ದೇನೆ.”
- “ನಾನು ಎಲ್ಲಾ ಜೀವಿಗಳನ್ನು ಸಮಾನವಾಗಿ ಪ್ರೀತಿಸುತ್ತೇನೆ.”
- “ನನ್ನ ಈ ಜೀವನಕ್ಕಾಗಿ, ನನಗೆ ಸಿಕ್ಕ ಸವಲತ್ತುಗಳಿಗಾಗಿ ಆಭಾರಿಯಾಗಿದ್ದೇನೆ.”
ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.
೩. ಅನಾಹತ ಚಕ್ರದ ಧ್ಯಾನ.
ಮನುಜ ಕುಲಕ್ಕೆ ಧ್ಯಾನ ಒಂದು ಅಧ್ಭುತ ಕೊಡುಗೆ. ಧ್ಯಾನದಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನಿರ್ದಿಷ್ಟವಾಗಿ ಅನಾಹತ ಚಕ್ರವನ್ನು ಸಕ್ರಿಯಗೊಳಿಸಲು ಕೆಲವು ಧ್ಯಾನ ಕ್ರಮಗಳಿವೆ. ಅದು ಸಾಧ್ಯವಾಗದೇ ಹೋದರೆ ಯಂ ಬೀಜಮತ್ರದ ಮೇಲೆ ಧ್ಯಾನ ಮಾಡಿರಿ.
೪. ಹಸಿರು ಬಣ್ಣದ ಬಳಕೆ:
ಈ ಚಕ್ರವು ಹಸಿರು ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ಹಸಿರು ಬಣ್ಣ ಬಳಸಿ, ಹಸಿರು ಪರದೆ, ಹಸಿರು ಬಣ್ಣದ ಧ್ಯಾನದ ಆಸನ, ಇತ್ಯಾದಿ. ಹಸಿರು ಬಣ್ಣದ ಬಟ್ಟೆಯನ್ನೂ ಹೆಚ್ಚು ಹೆಚ್ಚು ಬಳಸಬಹುದು.
ರೇಕಿ
ರೇಕಿಯನ್ನು
ಅನಾಹತ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.
೬. ಯೋಗಾಸನ
ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ಅನಾಹತ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ಭುಜಂಗಾಸನ, ಧನುರಾಸನ, ಅರ್ಧ ಮತ್ಸ್ಯೇಂದ್ರಾಸನ, ಉಷ್ಟ್ರಾಸನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು.
ಕೊನೆಯದಾಗಿ..
ಭಾವನಾತ್ಮಕ ಸಬಲತೆ ಪ್ರತಿಯೊಂದು ಜೀವಿಗೂ ಬಹಳ ಮುಖ್ಯ ಏಕೆಂದರೆ ಅದು ನಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಅನಾಹತ ಚಕ್ರದ ಕಾರ್ಯವನ್ನು ಅಚಲವಾಗಿಸಿ ನಮ್ಮೊಡನೆ ಮತ್ತು ಇತರರೊಡನೆ ಉತ್ತಮ ಸಂಬಂಧವನ್ನು ಉಳಿಸಿ ಬೆಳೆಸಿಕೊಳ್ಳುವುದರಿಂದ ಜೀವನವೂ ಅರ್ಥಪೂರ್ಣವಾಗುತ್ತದೆ.
Discover more from cosmiqgrace.com
Subscribe to get the latest posts sent to your email.